ಮಂಜೇಶ್ವರ :ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಮತ್ತು ಜೈ ತುಲುನಾಡ್ (ರಿ) ಕಾಸರಗೋಡು ವಲಯ ಸಹಯೋಗದಲ್ಲಿ, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಗಿಳಿವಿಂಡುವಿನಲ್ಲಿ 'ಕೆಡ್ಡಸದ ಪೊರ್ಲು ತಿರ್ಲ್ ' ಕಾರ್ಯಕ್ರಮವು ಫೆ.10 ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಜೀನ್ ಲೆವಿನೊ ಮೊಂತೆರೊ ಉದ್ಘಾಟಿಸಿ ತುಲುನಾಡಿನ ಕೆಡ್ಡಸ ಹಬ್ಬದಲ್ಲಿ ಭಾಗವಹಿಸಿ ತುಂಬಾ ಸಂತೋಷ ವಾಗಿದೆ,ತುಲುವಲ್ಲಿ ಪ್ರಪ್ರಥಮ ಬಾರಿಗೆ ಭಾಷಣ ಮಾಡುತ್ತಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು,
ಕೆಡ್ಡಸ ಆಚರಣೆ ಮತ್ತು ಅದರ ಉದ್ದೇಶದ ಬಗ್ಗೆ 'ಕೆಡ್ಡಸದ ಪೊರ್ಲು ತಿರ್ಲ್ ' ಬಗ್ಗೆ ವಿನೋದ ಪ್ರಸಾದ್ ರೈ ಕಾರಿಂಜ ,(ತುಲು ವಿಕಿಪೀಡಿಯಾ ಬರಹಗಾರ್ತಿ ಹಾಗೂ ಜೈ ತುಲುನಾಡ್. ರಿ ಸಂಘಟನೆಯ ಸದಸ್ಯೆ) ಮಾತನಾಡಿದರು. ನಮ್ಮ ಹಿರಿಯರು ಕೆಡ್ಡಸವನ್ನು ಹೇಗೆ ಮತ್ತು ಏಕೆ ಆಚರಿಸುತ್ತಿದ್ದರು ಎಂಬುದನ್ನು ತಿಳಿಸಿದರು,ಇಂದು ನಾವು ಬೇಸಾಯದಿಂದ ದೂರವಾದಂತೆ ನಮ್ಮ ಆಚರಣೆಗಳು ಮೂಲೆಗುಂಪಾಗುತ್ತಾ ಬರುವುದರೊಂದಿಗೆ ಪ್ರಕೃತಿಯ ವಿನಾಶವು ಆಗುತ್ತಾ ಇದೆ,ಇದರಿಂದಾಗಿ ನಮ್ಮ ಜೀವನ ಅಧೋಗತಿಗೆ ಸರಿಯುತ್ತಿದೆ. ನಾವು ನಮ್ಮ ಹಿರಿಯರ ಆಚರಣೆಗಳ ಒಳತಿರುಳನ್ನು ಅರಿತು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕಿದೆ ಎಂದರು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಮಂಜೇಶ್ವರದ ಶಾಸಕರಾದ ಎ.ಕೆ.ಎಂ ಆಶ್ರಫ್ ಮಾತನಾಡಿ,ತುಲು ಭಾಷೆಯನ್ನು ಎಂಟನೇ ಪರಿಚ್ಛೇದದಲ್ಲಿ ಸೇರಿಸಲು, ಹಾಗೂ ಕೇರಳದ ಅಧಿಕೃತ ಭಾಷೆಯ ಸ್ಥಾನ ಮಾನಕ್ಕಾಗಿ ನಿಮ್ಮ ಹೋರಾಟದ ಜತೆ ನಮ್ಮ ಪ್ರಯತ್ನ ನಡೆಯುತ್ತಾ ಇದೆ, ವಿಧಾನ ಸಭೆಯಲ್ಲಿ ತುಲುವಿನ ಬಗ್ಗೆ ಸ್ವರವೆತ್ತುವ ಭರವಸೆಯನ್ನು ನೀಡಿದರು.
ಉಮೇಶ್ ಶಿರಿಯಾ ಬರೆದಂತಹ ತುಲು ಕವನ ಸಂಕಲನ 'ದಾರಗೆದ ಕೂಟ' ಕೃತಿಯನ್ನು ಲೈಬ್ರರಿ ಕೌನ್ಸಿಲ್ ನ ಕಾರ್ಯದರ್ಶಿ ಕಮಲಾಕ್ಷ ಡಿ ಲೋಕಾರ್ಪಣೆ ಮಾಡಿದರು.ಒಂದು ಕಾಲದಲ್ಲಿ ತುಲು
ನಾಟಕ ಕಲಾವಿದನಾಗಿ ಹೆಸರು ಮಾಡಿದ ಅವರು ತುಲು ಕೃತಿಯನ್ನು ಲೋಕಾರ್ಪಣೆ ಮಾಡಿದುದು ಹೆಮ್ಮೆ ತಂದಿದೆ ಎಂದರು, ನಮ್ಮ ಮಾತೃಭಾಷೆ ತುಲುವಿನಲ್ಲಿ ಇನ್ನಷ್ಟು ಕೃತಿಗಳು ಬರಲಿ ಎಂದು ಶುಭ ಹಾರೈಸಿದರು,
ಇನ್ನೊಬ್ಬ ಮುಖ್ಯ ಅತಿಥಿ ಕಿರಣ್ ತುಲುವ, ಕಾರ್ಯದರ್ಶಿ ಜೈ ತುಲುನಾಡ್ ರಿ ಸಂಘಟನೆ ಕೇಂದ್ರ ಸಮಿತಿ ಇವರು ಶುಭ ಹಾರೈಸಿದರು,ಲೇಖಕ ಉಮೇಶ್ ಶಿರಿಯಾ ರವರನ್ನು ಜೈ ತುಲುನಾಡ್ ವತಿಯಿಂದ ಸನ್ಮಾನಿಸಲಾಯಿತು, ಜೈ ತುಲುನಾಡ್ ಕಾಸರಗೋಡು ಸಮಿತಿಯ ಅಧ್ಯಕ್ಷೆ ಕುಶಲಾಕ್ಷಿ ವಿ ಕಣ್ವತೀರ್ಥ ಕೆಡ್ಡಸದ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಗೋವಿಂದ ಪೈ ಸ್ಮಾರಕ ಸಮಿತಿಯ ಕಾರ್ಯದರ್ಶಿ ಉಮೇಶ್ ಸಾಲಿಯಾನ್ ಅಧ್ಯಕ್ಷೀಯ ಭಾಷಣದಲ್ಲಿ ತುಲುನಾಡಿನ ಸಾಂಸ್ಕೃತಿಕ ಆಚರಣೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜೈ ತುಲುನಾಡ್ ಸಂಘಟನೆಯ ಕೆಲಸ ಮೆಚ್ಚುವಂಥದ್ದು, ಗೋವಿಂದ ಪೈ ಸ್ಮಾರಕ ಸಮಿತಿ ಕಡೆಯಿಂದ ನಿಮ್ಮ ಯಾವುದೇ ಕಾರ್ಯಕ್ರಮಕ್ಕೂ ನಮ್ಮ ಸಂಪೂರ್ಣ ಸಹಕಾರವಿದೆ ಎಂದರು.
ಉಮೇಶ್ ಶಿರಿಯಾ, ರಮೇಶ್ ಅಟ್ಟೆಗೋಳಿ,ಪ್ರವೀಶ್ ಕುಲಾಲ್ ರವರು ದಾರಗೆದ ಕೂಟ ಕೃತಿಯ ಕವನಗಳನ್ನು ವಾಚಿಸಿದರು,
ಕು/ಸನ್ನಿಧಿ ಮತ್ತು ಮಾ/ಸಾನ್ವಿತ್ ಪ್ರಾರ್ಥನೆ ಗೈದರು,ಜೈ ತುಲುನಾಡ್ ನಾ ಉಪಾಧ್ಯಕ್ಷ ಕಾರ್ತಿಕ್ ಸ್ವಾಗತಿಸಿ, ಕುಶಲಾಕ್ಷಿ ವಿ ಕಣ್ವತೀರ್ಥ ವಂದಿಸಿದರು, ಸಂಘಟನೆಯ ಕಾರ್ಯದರ್ಶಿ ಜಗನ್ನಾಥ ಬದಿಯಡ್ಕ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು. ಹರಿಕಾಂತ್ ಕಾಸರಗೋಡು ನಿರೂಪಿಸಿ ದೇವಿಪ್ರಸಾದ್, ಪವಿತ್ರ ಮಾಡ,ರಾಜಶ್ರೀ ತಲಪಾಡಿ,ಚಿರ ಶ್ರೀ ದೇರಳಕಟ್ಟೆ, ವಿನಯ್ ತುಲುವ ಮಂಗಳೂರು ಸಹಕರಿಸಿದರು.ಕಾರ್ಯಕ್ರಮದಲ್ಲಿ ಕುಟುಂಬ ಶ್ರೀ ಸದಸ್ಯರು ಹಾಗೂ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.









