ಬಂಟ್ವಾಳ: ಜಗತ್ತಿಗೆ ಒಳಿತು ಬಯಸುವ ಸನಾತನ ಹಿಂದೂ ಧರ್ಮವು ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ಶ್ರದ್ಧಾ ಭಕ್ತಿಯಿಂದ ಪುನರ್ ನಿರ್ಮಾಣಗೊಳಿಸುವ ಮೂಲಕ ಸಾಮಾಜಿಕ ಪರಿವರ್ತನೆ ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಇಲ್ಲಿನ ಸಜಿಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು. ಈ ಹಿಂದೆ ಕೇವಲ ಮನೆಗೆ ಸೀಮಿತಗೊಂಡಿದ್ದ ಮಹಿಳೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸದೃಢ ಮತ್ತು ಸ್ವಾವಲಂಬಿಯಾಗಿದ್ದಾರೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ ಎಂ.ಭಂಡಾರಿ ದಂಪತಿ ಮತ್ತು ದಾನಿ ಲೀಲಾವತಿ ಭಂಡಾರಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಪುಣ್ಕೆಮಜಲು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜಕೀಯ ರಹಿತ ಧಾರ್ಮಿಕತೆಯಿಂದ ಸಮಾಜ ಬಲಿಷ್ಟವಾಗುತ್ತದೆ ಎಂದರು.
ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಅನಂತಕೃಷ್ಣ ಅಸ್ರಣ್ಣ ಮಾತನಾಡಿ, ಕಲಿಯುಗದಲ್ಲಿ ಸಂಕೀರ್ತನೆ ಮೂಲಕ ದೇವರನ್ನು ಸುಲಭವಾಗಿ ಒಲಿಸಿಕೊಳ್ಳಲು ಸಾಧ್ಯವಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ವಿಧಾನಸಭೆ ಪ್ರತಿಪಕ್ಷ ನಾಯಕ ಯು.ಟಿ.ಖಾದರ್, ಕೊಲ್ಲೂರು ಕ್ಷೇತ್ರದ ಮಾಜಿ ಧರ್ಮದರ್ಶಿ ಕೃಷ್ಣಪ್ರಸಾದ್ ಅಡ್ಯಂತಾಯ, ಉದ್ಯಮಿ ವಿವೇಕ್ ಶೆಟ್ಟಿ
ನಗ್ರಿಗುತ್ತು, ಕೃಷಿ ಅಭಿವೃದ್ದಿ ಸಹಕಾರಿ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಶುಭ ಹಾರೈಸಿದರು.
ನಂದಾವರ ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಎ.ಸಿ. ಭಂಡಾರಿ, ದೇವಳದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೆ.ರಾಧಾಕೃಷ್ಣ ಆಳ್ವ, ಪ್ರಗತಿಪರ ಕೃಷಿಕ ಸುಬ್ರಾಯ ಕಾರಂತ ಕಾನ್ಸಾಲೆ, ಪ್ರಮುಖರಾದ ಸುರೇಶ ಆಳ್ವ ಬಿಜಂತಾಡಿಗುತ್ತು, ಪ್ರಶಾಂತ ಕಾಜವ, ಶ್ರೀಕಾಂತ್ ಶೆಟ್ಟಿ, ದುರ್ಗಾಪ್ರಸಾದ್ ಗೋಳಿದಡಿ, ಪುಣೆ ಉದ್ಯಮಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಆರಾಧನಾ ಸಮಿತಿ ಅಧ್ಯಕ್ಷ ಯಶವಂತ ದೇರಾಜೆ ಇದ್ದರು.
ಇದೇ ವೇಳೆ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರವೀಂದ್ರನಾಥ ಎಂ. ಭಂಡಾರಿ ಪುಣ್ಕೆಮಜಲು ಇವರಿಗೆ 'ಸ್ಕಂದಶ್ರೀ 'ಪ್ರಶಸ್ತಿ ಪ್ರದಾನ ಮತ್ತು ಅಶೋಕ ಭಂಡಾರಿ ಪಠೇಲರಮನೆ, ಕೃಷ್ಣ ಶೆಟ್ಟಿ ಧರ್ಮಸ್ಥಳ ಇವರನ್ನು ಅಭಿನಂದಿಸಲಾಯಿತು.
ಉದ್ಯಮಿ ಅಶೋಕ ಪಕ್ಕಳ ವಾಮದಪದವು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ವಂದಿಸಿದರು. ಶಿವಪ್ರಸಾದ್ ಶೆಟ್ಟಿ ಮತ್ತು ಪ್ರಮೋದ್ ಕಾರ್ಯಕ್ರಮ ನಿರೂಪಿಸಿದರು.














