ಮಂಗಳೂರು: ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯೆಯಲ್ಲಿ ಭಾಗಿಯಾದ ಮೂವರು ಹಂತಕರನ್ನು ಕರ್ನಾಟಕ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಜು 26 ರಂದು ಸಂಜೆ ಬೆಳ್ಳಾರೆಯ ಮಾಸ್ತಿ ಕಟ್ಟೆ ಬಳಿ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಪ್ರವೀಣ್ ಅವರನ್ನು ಕಡಿದು ಕೊಲೆ ಮಾಡಿದ್ದರು. ಈ ಬಗ್ಗೆ ಈಗಾಗಾಲೇ ಒಟ್ಟು 7 ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದರು .
ಇದೀಗ ಮೂವರು ಪ್ರಮುಖ ಆರೋಪಿಗಳನ್ನು ಬುಧವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇದೀಗ ಶಂಕಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಗುರಿಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಇದೇ ಹಿನ್ನೆಲೆಯಲ್ಲಿ ಮಧ್ಯಾಹ್ನ 12.30ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಷ್ ಸೋನಾವಣೆಯವರು ಮಂಗಳೂರಿನಲ್ಲಿ ಪತ್ರಿಕಾ ಗೋಷ್ಟಿ ಕರೆದಿದ್ದು ಅದರಲ್ಲಿ ಹತ್ಯೆ ಸಂಚಿನ ಸಂಪೂರ್ಣ ವಿವರ, ಹತ್ಯೆಯ ಹಿಂದಿನ ಕಾರಣ ಹಾಗೂ ಆರೋಪಿಗಳ ವಿವರ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಇದೇ ಪ್ರಕರಣದಲ್ಲಿ
ಜುಲೈ 28 ರಂದು ಶಫೀಕ್ ಮತ್ತು ಜಾಕೀರ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಬೆಳ್ಳಾರೆ ಪಳ್ಳಿಮಜಲು ನಿವಾಸಿಗಳಾದ ಸದ್ದಾಂ ಮತ್ತು ಹ್ಯಾರಿಸ್ ಎಂಬವರನ್ನು ಬಂಧಿಸಲಾಗಿತ್ತು. ಅದಾದ ಬಳಿಕ ಸುಳ್ಯ ನಾವೂರು ನಿವಾಸಿ ಅಬಿದ್ ಹಾಗೂ ಬೆಳ್ಳಾರೆ ಗೌರಿಹೊಳೆ ನಿವಾಸಿ ನೌಫಲ್ ಎಂಬರನ್ನು ಬಂಧಿಸಲಾಗಿತ್ತು. . ಅ.9 ರಂದು ಸುಳ್ಯದ ಜಟ್ಟಿಪಳ್ಳ ನಿವಾಸಿ ಅಬ್ದುಲ್ ಕಬೀರ್ ಎಂಬತಾನನ್ನು ಕೂಡ ಬಂಧಿಸಿದ್ದರು . ಈ 7 ಆರೋಪಿಗಳಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಈ ಹತ್ಯೆ ಆರೋಪಿಗಳಿಗೆ ಪಾಪ್ಯುಲರ್ ಫ್ರಂಟ್ ಅಪ್ ಇಂಡಿಯಾ ಎಂಬ ಸಂಘಟನೆಯ ಲಿಂಕ್ ಇರುವ ಸಾಧ್ಯತೆಯ ಬಗ್ಗೆ ತನಿಖೆಯ ಉಸ್ತುವಾರಿ ವಹಿಸಿರುವ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಸುಳಿವು ನೀಡಿದ್ದರು,ತನಿಖೆ ಪ್ರಗತಿಯಲ್ಲಿದ್ದು ನಿಜಾಂಶ ಇಂದು ಹೊರಬೀಳಲಿದೆ.
















