ಬಂಟ್ವಾಳ :ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು ಎಂಬಂತೆ ಕಳೆದ 12 ವರ್ಷಗಳಿಂದ ಸನಾತನ ಭಾರತೀಯ ಸಂಸ್ಕೃತಿಯ ಜೊತೆಗೆ ಆಧುನಿಕ ಶಿಕ್ಷಣವನ್ನು ಒದಗಿಸುತ್ತಾ, ಪಠ್ಯ-ಪಠ್ಯೇತರ ಚಟುವಟಿಕೆಗಳಿಗೆ ಮಹತ್ವ ಕೊಡುತ್ತಾ ಬಂದಿರುವ ಶ್ರೀರಾಮ ಪ್ರಥಮ ದರ್ಜೆ ಕಾಲೇಜು, ಕಲ್ಲಡ್ಕ ಇಲ್ಲಿನ 2022-23ನೇ ವರ್ಷದ ವಾರ್ಷಿಕೋತ್ಸವ- ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಭಾ ದಿನೋತ್ಸವವು ಜು.08 ಶನಿವಾರದಂದು ಸಂಪನ್ನಗೊಂಡಿತು.
ಅತಿಥಿಗಳ ಆಗಮನದ ನಂತರ ಅವರ ಸಮ್ಮುಖದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು. ಅನಂತರದಲ್ಲಿ ಸಭಾ ಕಾರ್ಯಕ್ರಮದ ಜೊತೆಗೆ ಪ್ರತಿಭಾ ಪುರಸ್ಕಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಅವರು ವಹಿಸಿ ವಿದ್ಯಾರ್ಥಿಗಳು ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮನ್ನು ತಾವೇ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮಕ್ಕೆ ಅಭ್ಯಾಗತರಾಗಿ ಆಗಮಿಸಿದ ಖ್ಯಾತ ಹಿನ್ನೆಲೆ ಧ್ವನಿ ಕಲಾವಿದರಾದ ಬಡೆಕ್ಕಿಲ ಪ್ರದೀಪ್ ಅವರು ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ, ಆ ಪ್ರತಿಭೆಗೆ ತಕ್ಕ ಅವಕಾಶ ಸಿಗಬೇಕು, ನಮ್ಮ ನಮ್ಮ ದೌರ್ಬಲ್ಯಗಳನ್ನು ತಿಳಿದು ಸರಿಪಡಿಸಿಕೊಂಡು ಮುಂದೆ ಸಾಗಬೇಕು ಎಂದು ನುಡಿದರು.
ಖ್ಯಾತ ಭಾಗವತರಾದ ಶ್ರೀಮತಿ ಅಮೃತಾ ಅಡಿಗ ಅವರೂ ಸಹ ಮಕ್ಕಳ ಪ್ರತಿಭಾ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಏತನ್ಮಧ್ಯೆ ಪ್ರತಿಭಾ ಪುರಸ್ಕಾರವೂ ಸಹ ನಡೆದಿದ್ದು 2022-23ನೇ ಸಾಲಿನ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ವಿವಿಧ ಕಾಲೇಜು ಮಟ್ಟದ, ವಿಶ್ವ ವಿದ್ಯಾಲಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ, ಸಿ ಎ (ಯಕ್ಷಿತ್), ಸಿ ಎಸ್(ಕೀರ್ತಿ)
ಸೇರಿದಂತೆ ವಿವಿಧ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು, ಕಳೆದ ಶೈಕ್ಷಣಿಕ ವರ್ಷದಲ್ಲಿ 4ನೇ ಶ್ರೇಯಾಂಕ ಗಳಿಸಿದ ವಾಣಿಜ್ಯ ವಿದ್ಯಾರ್ಥಿನಿ ಕು. ನಿರೀಕ್ಷಾ ಇವರನ್ನು ಗುರುತಿಸಿ ಬಹುಮಾನಗಳನ್ನು ಹಸ್ತಾಂತರಿಸಲಾಯಿತು. ಹಾಗೆಯೇ ದತ್ತಿನಿಧಿ ವಿತರಣೆಯು ಸಹ ನಡೆಯಿತು. "ಪಾಂಚಜನ್ಯ" ಹಳೆ ವಿದ್ಯಾರ್ಥಿಗಳ ಸಂಘದ ಲಾಂಛನ (ಶಂಖ)ವನ್ನು ಈ ಸಂದರ್ಭದಲ್ಲಿ ಡಾ. ಭಟ್ ಅವರು ಬಿಡುಗಡೆಗೊಳಿಸಿದರು. ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ರಾಜೇಶ್ ನರಿಂಗಾಣ ಹಾಗೂ ಅಮೃತಾ ಅಡಿಗ ಅವರ ತಾಯಿ ಶ್ರೀಮತಿ ಜಯಲಕ್ಷ್ಮೀ ಉಪಸ್ಥಿತರಿದ್ದು ಬಹುಮಾನ ವಿತರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ನಿರ್ವಹಣೆಯನ್ನು ಕು. ಕೀರ್ತಿ ವಹಿಸಿದ್ದರೆ, ಸಭಾ ಕಾರ್ಯಕ್ರಮದ ನಿರೂಪಣೆಯನ್ನು ಕು. ಹರ್ಷಿತಾ ಅವರು ನಡೆಸಿದರು. ಪ್ರಾಚಾರ್ಯ ಕೃಷ್ಣ ಪ್ರಸಾದ್ ಸ್ವಾಗತಿಸಿ, ವಿದ್ಯಾರ್ಥಿನಿ ಕು. ಪ್ರತೀಕಾ ವಂದಿಸಿದರು. ಮಧ್ಯಾಹ್ನದ ನಂತರದಲ್ಲಿ ಲಘು ಪ್ರಹಸನ ಹಾಗೂ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಂದ "ಶ್ರೀರಾಮ ದರ್ಶನ" ಯಕ್ಷಗಾನ ಕಾರ್ಯಕ್ರಮವು ನಡೆಯಿತು. ಕೊನೆಯಲ್ಲಿ ಯಕ್ಷಗುರುಗಳಾದ ಮೋಹನ್ ಕುಮಾರ್ ಅಮ್ಮುಂಜೆಯವರನ್ನು ಡಾ. ಪ್ರಭಾಕರ ಭಟ್ ಅವರು ಶಾಲು ಹೊದಿಸಿ ಸನ್ಮಾನಿಸಿದರು. ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ಕಾಣಿಕೆಯನ್ನರ್ಪಿಸಿದರು















