Coastal Bulletin

ಬಂಟ್ವಾಳ: ಯುವಶಕ್ತಿ ರಾಷ್ಟ್ರದ ಶಕ್ತಿಯಾಗಿದ್ದು, ಸಮಾಜದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಮಹತ್ವದ್ದಾಗಿದೆ. ಯುವ ಸಂಘಟನೆಗಳು ಸಮುದಾಯಕ್ಕೆ ಅನುಕೂಲವಾಗುವ ರಚನಾತ್ಮಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಳ್ಳಿಗೆ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಯಶೋಧ ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ನಡೆದ ಬಂಟ್ವಾಳ ಶ್ರೀ ವೆಂಕಟರಮಣ ಸ್ವಾಮೀ ಕಾಲೇಜಿನ ರಾಷ್ಟಿಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಶಿಸ್ತು, ಸಮಾಜ ಪರ ಕಾಳಜಿ ಬೆಳೆಸಲು ಸಹಕಾರಿಯಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ,ನ್ಯಾಯವಾದಿ ಶೈಲಜಾ ರಾಜೇಶ್ ಮಾತನಾಡಿ, ವಿದ್ಯಾರ್ಥಿ ದೆಸೆಯಲ್ಲೇ ಸಮಾಜ ಸೇವೆ, ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಾಮೋದರ್ ನೆತ್ತರಕೆರೆ, ಮಾತನಾಡಿ ಜ್ಞಾನಾರ್ಜನೆಯ ಜೊತೆಗೆ ಯುವಕರು

ಸಾಮಾಜಿಕ ಕಾಳಜಿ ಬೆಳೆಸಿಕೊಳ್ಳುವುದು ಮುಖ್ಯವಾಗಿದ್ದು, ನಾಲ್ಕು ಗೋಡೆಯ ನಡುವೆ ಕಲಿಯುವ ಪುಸ್ತಕ ಜ್ಞಾನಕ್ಕಿಂತ ಸಮುದಾಯದ ನಡುವೆ ಕಲಿಯುವ ಅನುಭವ ದೊಡ್ಡದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಸುಯೋಗ ವರ್ಧನ್ ಡಿ.ಎಂ. ಮಾತನಾಡಿ ಹಳ್ಳಿಗಳು ಮತ್ತು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯ ಸದುದ್ದೇಶವನ್ನು ಗಮನದಲ್ಲಿರಿಸಿಕೊಂಡು ಯುವಕರು ಹೆಜ್ಜೆ ಇರಿಸಬೇಕು ಎಂದರು.

ಸ್ಥಳೀಯ ಗ್ರಾಮ ಪಂಚಾಯಿತ್ ಸದಸ್ಯರು, ಸ್ಥಳೀಯ ಪ್ರಮುಖರಾದ ಜ್ಯೋತೇಂದ್ರ ಶೆಟ್ಟಿ ಮುಂಡಾಜೆ ಗುತ್ತು.ಸುಬ್ರಹ್ಮಣ್ಯ ರಾವ್ ಉಪಸ್ಥಿತರಿದ್ದರು. ಕಾರ್ಯಕ್ರಮಾಧಿಕಾರಿಯಾದ ಡಾ. ವಿನಾಯಕ ಕೆ. ಎಸ್, ಸ್ವಾಗತಿಸಿ, ಸುಪ್ರೀತ್ ಕಡಕೊಳ್ ವಂದಿಸಿದರು, ಸಹಯೋಜನಾಧಿಕಾರಿ ಕಿಟ್ಟು ರಾಮಕುಂಜ ಕಾರ್ಯಕ್ರಮ ನಿರೂಪಿಸಿದರು.  

Leave a Comment