ಬಂಟ್ವಾಳ: ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಂಟ್ವಾಳ ಶ್ರೀ ಯಶವಂತ ವ್ಯಾಯಾಮ ಶಾಲೆಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ವರ್ಗಕ್ಕೆ ಸೇರಿದ 12 ಕುಟುಂಬಗಳಿಗೆ ಒಟ್ಟು 5 ಲಕ್ಷ ರೂ. ಸಹಾಯಧನವನ್ನು ವಿತರಿಸಲಾಯಿತು.
ಇದಕ್ಕು ಮೊದಲ ಭಾನುವಾರ ಟ್ರಸ್ಟ್ ವತಿಯಿಂದ ಅಶಕ್ತರ ಸಹಾಯನಿಧಿಗಾಗಿ ಕ್ರಿಕೆಟ್ ಪಂದ್ಯಾಟವನ್ನು ಬಂಟ್ವಾಳ ಎಸ್.ವಿ.ಎಸ್ ಹೈಸ್ಕೂಲಿನ ಮೈದಾನದಲ್ಲಿ ನಡೆಸಲಾಗಿತ್ತು. ಇದರಲ್ಲಿ ನಾಲ್ಕು ತಂಡಗಳು ಭಾಗವಹಿಸಿದ್ದು, ಭದ್ರಾ ಚಾಲೆಂಜರ್ಸ್ ಪ್ರಥಮ ಸ್ಥಾನ ಹಾಗೂ ರಾಯಲ್ ಚಾಲೆಂಜರ್ಸ್ ದ್ವಿತೀಯ ಸ್ಥಾನ ಗಳಿಸಿತ್ತು.
ಪ್ರಥಮ ಸ್ಥಾನ ಪಡೆದ ತಂಡ ರೂಪಾಯಿ 1.50 ಲಕ್ಷ ರೂ. ಹಾಗೂ ದ್ವಿತೀಯ ಸ್ಥಾನ ಪಡೆದ ತಂಡ 1 ಲಕ್ಷ ರೂ. ಹಾಗೂ ಉಳಿದಂತೆ 2 ತಂಡಗಳು ತಲಾ ಐವತ್ತು ಸಾ. ರೂ.ಮೊತ್ತವನ್ನು ಆಶಕ್ತರ ಸಹಾಯನಿಧಿಗೆ ಹಸ್ತಾಂತರಿಸಿದ್ದವು. ಹಾಗೆಯೇ ಉಳಿದಂತೆ ಟ್ರಸ್ಟ್ ನಿಂದ ಹೆಚ್ಚುವರಿಯಾಗಿ 1.50 ಲಕ್ಷವನ್ನು ಸೇರಿಸಿ 5 ಲಕ್ಷ ರೂ.ಸಹಾಯನಿಧಿಯನ್ನು ಒಟ್ಟು 12 ಕುಟುಂಬಗಳಿಗೆ ಈ ಕಾರ್ಯಕ್ರಮದಲ್ಲಿ ವಿತರಿಸಲಾಯಿತು.
ಸಹಾಯಧನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟ್ ನ ಮುಖ್ಯಸ್ಥರಾದ ಅರ್ಜುನ್ ಭಂಡಾರ್ಕರ್ ವಹಿಸಿದ್ದರು.ಎಸ್. ವಿ .ಎಸ್ ಶಾಲಾ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ಮಲ್ಯ, ಸ್ವರ್ಣೋದ್ಯಮಿ ಬಿ.ನಾಗೇಂದ್ರ
ಬಾಳಿಗ, ಉದ್ಯಮಿಗಳಾದ ರೋ.ಮಂಜುನಾಥ್ ಆಚಾರ್ಯ ಬಂಟ್ವಾಳ,ರವೀಂದ್ರ ವಾಮನ ಬಾಳಿಗ ಅವರು ಅತಿಥಿಯಾಗಿ ಭಾಗವಹಿಸಿ ಟ್ರಸ್ಟ್ ನ ಕಾರ್ಯ ಚಟುವಟಿಕೆಯನ್ನು ಶ್ಲಾಘಿಸಿದರಲ್ಲದೆ ಮುಂದಿನ ದಿನಗಳಲ್ಲು ಟ್ರಸ್ಟ್ ಗೆ ಸಂಪೂರ್ಣ ಸಹಕಾರ ನೀಡುವ ಭರವಸೆಯಿತ್ತರು. ಟ್ರಸ್ಟ್ ನ ಕೋಶಾಧಿಕಾರಿ ಭಾಗ್ಯಶ್ರೀ ಭಂಡಾರ್ಕರ್ ಉಪಸ್ಥಿತರಿದ್ದರು.
ಇದೇ ವೇಳೆ ಸ್ಕೂಲ್ ಬುಕ್ ಕಂಪನಿಯ ಪದ್ಮನಾಭ ಭಂಡಾರಿ ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಟ್ರಸ್ಟ್ ನ ಸದಸ್ಯ ಬಿ.ಎಚ್ .ಗಿರೀಶ್ ಪೈ ಅವರು ಪ್ರಸ್ತಾವಿಕವಾಗಿ ಮಾತನಾಡಿ, ಯಾವುದೇ ಜಾತಿ,ಮತ,ಬೇಧ ವಿಲ್ಲದೆ ಫಲಾನುಭವಿಗಳನ್ನು ಗುರುತಿಸಿ,ಅವರ ಹಿನ್ನಲೆಯನ್ನು ಪರಿಶೀಲಿಸಿದ ಬಳಿಕವೇ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಸಹಾಯನಿಧಿಯನ್ನು ವಿತರಿಸುವ ಮೂಲಕ ಅವರ ಕಷ್ಟಕ್ಕೆ ಸ್ಪಂದಿಸುತ್ತಿದೆ ಎಂದರು.
ಟ್ರಸ್ಟ್ ಮೇಲಿನ ವಿಶ್ವಾರ್ಹತೆಯಿಂದ ದಾನಿಗಳು ಸ್ಪಂದಿಸಿ ನೇರವಾಗಿ ಟ್ರಸ್ಟ್ ಖಾತೆಗೆ ಧನ ಸಹಾಯ ಮಾಡಿದರೆ,ಇನ್ನು ಕೆಲವರು ಮುಖ್ಯಸ್ಥರನ್ನು ಭೇಟಿಯಾಗಿ ಹಸ್ತಾಂತರಿಸುತ್ತಾರೆ ಎಂದು ಅವರು ಸ್ಪಷ್ಟ ಪಡಿಸಿದರು.ಪಿ ವಸಂತ್ ಪ್ರಭು ಸ್ವಾಗತಿಸಿದರು.ಶ್ರೀನಿವಾಸ್ ಪೈ ಹಾಗೂ ಜಿತೇಂದ್ರ ಶೆಣೈ ಸಹಕರಿಸಿದರು.














