ಭರತ ಖಂಡವು ಧಾರ್ಮಿಕ ಹಾಗೂ ದಾರ್ಶನಿಕರ ನೆಲೆವೀಡು,ಅದರಲ್ಲಿಯೂ ಪರಶುರಾಮನ ಸೃಷ್ಟಿಯ ಸುಂದರ ಪ್ರಕೃತಿ ರಮಣೀಯ ತುಳುನಾಡಿನಲ್ಲಿ ದೇವರಾಧನೆ, ದೈವರಾಧನೆ,ನಾಗರಾಧನೆ, ಸಂಸ್ಕೃತಿ, ಸಂಸ್ಕಾರಗಳು ಆಸ್ತಿಕ ಭಕ್ತ ಜನರೊಟ್ಟಿಗೆ ಈ ಮಣ್ಣಿನಲ್ಲಿ ಬೆಸೆದುಕೊಂಡಿರುವ ರೀತಿ ಬೆರಗು ಹುಟ್ಟಿಸುವಂತದ್ದು. ಇಲ್ಲಿನ ಪ್ರತಿಯೊಂದು ಆಚರಣೆ, ನಂಬಿಕೆ ಹಾಗೂ ಊರಿಗೂ ವಿಶೇಷವಾದ ಒಂದು.ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನಲೆ ಇದೆ ಇಂತಹ ಇತಿಹಾಸವನ್ನು ಹೊಂದಿರುವ ಬಂಟ್ವಾಳ ತಾಲೂಕಿನ ತುಂಬೆ ಹಾಗೂ ಇಲ್ಲಿ ನೆಲೆ ನಿಂತ ಶ್ರೀ ಮಹಾಲಿಂಗೇಶ್ವರನ ಕ್ಷೇತ್ರವೂ ಕೂಡ ಪ್ರಮುಖ ಸ್ಥಾನ ಪಡೆಯುತ್ತದೆ.
ಸ್ಥಳ ಪುರಾಣ :
ಜಿಲ್ಲೆಯ ಜೀವನದಿ ನೇತ್ರಾವತಿ ನದಿಯ ತಟದಲ್ಲಿ ಬಹಳ ಹಿಂದಿನ ರಾಜಾಡಳಿತ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಪುಣ್ಯ ಕ್ಷೇತ್ರ ಗ್ರಾಮ ದೇವಸ್ಥಾನ ತುಂಬೆಯ ಶ್ರೀ ಮಹಾಲಿಂಗೇಶ್ವರ ಕ್ಷೇತ್ರ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕೇಂದ್ರವಾಗಿ ವೈಭವದಿಂದ ಮೆರೆದಾಡಿದ ಕ್ಷೇತ್ರ ಕಾಲಾನುಕ್ರಮದಲ್ಲಿ ನದಿಯ ಕೊರೆತಕ್ಕೆ ಒಳಗಾಗಿ ಸಂಪೂರ್ಣ ಜಲಾಧಿವಾಸವಾಯಿತು ಹೀಗೆ ಮರೆಯಾದ ಪುಣ್ಯಕ್ಷೇತ್ರದಿಂದ ಆರಾಧನೆಯ ಅನುಕೂಲತೆಗಾಗಿ ಬ್ರಾಹ್ಮಣಾಡಳಿತ ಕಾಲದಲ್ಲಿ ಶ್ರೀ ಮಹಾಲಿಂಗೇಶ್ವರನು ಅಗ್ರಹಾರದಲ್ಲಿ ವೆಂಕಟರಮಣ, ಗಣಪತಿ ದೇವರು, ರಸ್ತೆಶ್ವಲ, ನಾಗದೇವರು ಮೊದಲಾದ ಪಲವಾರ ದೇವರೊಂದಿಗೆ ಪ್ರತ್ಯೇಕವಾಗಿ ಪೂಜಿಸಲ್ಪಟ್ಟಿತ್ತು ಎಂಬುದು ಇತ್ತೀಚೆಗೆ ಪ್ರಶ್ನಾ ಚಿಂತನ ನಡೆಸಿದಾಗ ಕಂಡುಕೊಂಡ ಸತ್ಯ.
ಪ್ರಸ್ತುತ ಕಾಲಘಟ್ಟದಲ್ಲಿ ಕ್ಷೇತೇಶ ಸ್ಥಾನದಲ್ಲಿರುವ ತುಂಬೆಗುತ್ತು ಕುಟುಂಬಿಕರು ಹಾಗೂ ಗ್ರಾಮಸ್ಥರು ಸಮಾನ ಮನಸ್ಥರಾಗಿ 1993 94 ಲಾಗಾಯ್ತು ನವೀಕರಣಾದಿ ಕಾರ್ಯಗಳನ್ನು ನೆರವೇರಿಸಿ ನಿತ್ಯ ಪೂಜಾ ಸೇವಾ ಕೈಂಕರ್ಯಗಳನ್ನು, ಆರಾಧನಾ ನಿರ್ವಹಣೆಯನ್ನು ಸುಸೂತ್ರವಾಗಿ ನೆರವೇರಿಸಿಕೊಂಡು ಬರುತ್ತಿದ್ದಾರೆ.
ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ, ದೈವಜ್ಞರಾದ ಶ್ರೀ ವಿಷ್ಣು ಹೆಬ್ಬಾರ್ ಪೂಪ್ಯಕಾಲ್ಟ್ ಅವರ ಅಷ್ಟಮಂಗಲ ಚಿಂತನೆಯಲ್ಲಿ ಕ್ಷೇತ್ರದ ಇತಿಹಾಸದ ಬಗ್ಗೆ ದೊರೆತ ಸ್ಪಷ್ಟ ಮಾಹಿತಿಯಂತೆ ನದಿತೀರದಲ್ಲಿ ಉತ್ಪತನ ನಡೆಸಿದಾಗ ದೊರೆತ ಶಿವಲಿಂಗವನ್ನು ಪ್ರಸ್ತುತ ನಾವು ಆರಾಧಿಸಿಕೊಂಡು ಬರುತ್ತಿರುವ ಸನ್ನಿಧಿಯಲ್ಲಿ ಬಾಲಾಲಯವನ್ನು ನಿರ್ಮಿಸಿ ಅಲ್ಲ ಸಂರಕ್ಷಿಸಿ ಇಡಲಾಗಿದೆ.
ಮೂಲಸ್ಥಳದಲ್ಲಿ ಸ್ಥಳದ ಅಭಾವವಿರುವುದರಿಂದ ಇದೀಗ ಸದ್ರಿ ಶ್ರೀ ಮಹಾಲಿಂಗೇಶ್ವರನ ಅಗ್ರಹಾರದಲ್ಲಿ ವೆಂಕಟರಮಣ ಗಣಪತಿ ದೇವರ ಸಾನ್ನಿಧ್ಯವಿರುವಲ್ಲಿ ನವೀನ ಪ್ರಾನಾದವನ್ನು ರಚಿಸಿ ನದಿ ತೀರದಲ್ಲಿ ದೊರೆತ ಶಿವಲಿಂಗದ ಪುನರ್
ಪ್ರತಿಷ್ಠಾಪನೆಗೆ ಸಂಕಲ್ಪಿಸಿ, ಪ್ರಸ್ತುತ ನೂತನ ದೇವಸ್ಥಾನ ನಿರ್ಮಾಣಗೊಂಡಿದ್ದು ಬ್ರಹ್ಮಕಲಶದ ಸಂಭ್ರಮಕ್ಕೆ ಕ್ಷಣ ಗಣನೆ ಪ್ರಾರಂಭವಾಗಿದೆ.
ಫೆ.13ರಿಂದ 23ರ ವರೆಗೆ ಬ್ರಹ್ಮಕಲಶಾಭಿಷೇಕದ ಸಂಭ್ರಮ.
ಸುಮಾರು ರೂ 7ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಮಹಾಲಿಂಗೇಶ್ವರ ದೇವಸ್ಥಾನವು ಗರ್ಭ ಗುಡಿ, ತೀರ್ಥ ಮಂಟಪ, ಸುತ್ತು ಪೌಳಿ, ಭಾವಿ ಹಾಗೂ ದೇವಸ್ಥಾನದ ಎದುರಿನ ಆಕರ್ಷಣಿಯ ಕೆರೆ,ಆಸ್ತಿಕ ಭಕ್ತರ ಮನ ಸೆಳೆಯುತಿದೆ.ಫೆ.13ರಿಂದ 23ರ ವರೆಗೆ ಕ್ಷೇತ್ರದಲ್ಲಿ ಪುನಃ ಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ಮತ್ತು ಧ್ವಜಸ್ತಂಭ ಪ್ರತಿಷ್ಠೆ ಹಾಗೂ ಜಾತ್ರಾ ಮಹೋತ್ಸವ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ.
ಫೆ.11ರಂದು ಹೊರೆ ಕಾಣಿಕೆ ಮೆರವಣಿಗೆ :
ಬ್ರಹ್ಮ ಕಲಶದ ಸಡಗರದಲ್ಲಿರುವ ಶ್ರೀ ಮಹಾಲಿಂಗೇಶ್ವರನ ಸನ್ನಿದಿಗೆ ಹಸಿರುವಾಣಿ ಹೊರೆ ಕಾಣಿಕೆಯು ಫೆ.11ರಂದು ಮಧ್ಯಾಹ್ನ 3ರಿಂದ ಬಿ ಸಿ ರೋಡ್ ಶ್ರೀ ರಕ್ತೇಶ್ವರಿ ದೇವಸ್ಥಾನದಿಂದ ಬರಲಿದೆ, ಮಾಣಿಲ ಶ್ರೀ ಗಳು ಭವ್ಯ ಮೆರವಣಿಗೆಗೆ ಚಾಲನೆ ಕೊಡಲಿದ್ದಾರೆ.
ಉತ್ಸವ ಸಂದರ್ಭದಲ್ಲಿ ಪ್ರತಿದಿನ ವೈದಿಕ ಕಾರ್ಯಕ್ರಮ,ಭಜನೆ,ಧಾರ್ಮಿಕ ಸಭೆ, ಸಾಂಸ್ಕೃತಿಕ ವೈಭವ,ಅನ್ನಸಂತರ್ಪಣೆ ನಡೆಯಲಿದೆ, ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ 48ದಿನಗಳ ಸಂಧ್ಯಾಭಜನೆಯು ಶ್ರೀ ಕ್ಷೇತ್ರದಲ್ಲಿ ಶ್ರದ್ಧಾ ಭಕ್ತಿಯಿಂದ ಹೆಚ್ಚಿನ ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ನಡೆದಿತ್ತು.
ಹೊಸ ದೇವಸ್ಥಾನ ನಿರ್ಮಾಣವು, ದೂರದೃಷ್ಟಿ ಹಾಗೂ ಸಾಮಜಮುಖಿ ಚಿಂತನೆಗೆ ಸಾಕ್ಷಿಯಾಗಲಿ, ಧಾರ್ಮಿಕ ಆದ್ಯಾತ್ಮಿಕ ಕಾರ್ಯಗಳೊಂದಿಗೆ ಸಂಘಟನಾತ್ಮಕವಾಗಿ ನಿರಂತರ ಧಾರ್ಮಿಕ ಶಿಕ್ಷಣ, ಸಾಹಿತ್ಯ, ಕಲಾ ಸೇವೆಗಳು ನಡೆಯಲಿ, ಸಮಾಜದ ಕಷ್ಟ ಕಾರ್ಪಣ್ಯಗಳು ದೂರವಾಗಿ ಸರ್ವರಿಗೂ ಸುಖ ಶಾಂತಿ ನೆಮ್ಮದಿ ಸಿಗಲಿ,ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ದೇಗುಲವು ನಾಂದಿಯಾಗಲಿ ಎಂಬುದು ನಮ್ಮ ಆಶಯ









