ಬಂಟ್ವಾಳ :ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಇದರ ಅಷ್ಟಬಂಧ ಬ್ರಹ್ಮಕಲಶ ಪ್ರಯುಕ್ತ ಭಾನುವಾರ ಭಕ್ತರಿಂದ ಕರಸೇವೆಗೆ ಚಾಲನೆ ನೀಡಲಾಯಿತು. ಹೆಂಚುಗಳನ್ನು ತೆರವುಗೊಳಿಸುವುದು, ಶುಚಿಗೊಳಿಸುವುದು, ಚಾವಣಿ ದುರಸ್ತಿ, ಪೈಂಟಿಂಗ್, ಅಂಗಣ ದುರಸ್ತಿ, ಕಲ್ಲುಹಾಸು ತೆರವುಗೊಳಿಸುವುದು ಇತ್ಯಾದಿ ಕೆಲಸಗಳು ಭರದಿಂದ ಸಾಗುತ್ತಿದೆ. ಬೆಳಿಗ್ಗೆ 8 ಗಂಟೆಗೆ ಸರಿಯಾಗಿ ಕರಸೇವರಕರು ಬಂದು ಶ್ರದ್ಧೆಯಿಂದ ಭಾಗವಹಿಸಿದ್ದು, ಶ್ರಮದಾನ ಯಶಸ್ವಿಯಾಗಿ ನೆರವೇರುವ ಸ್ಪಷ್ಟ ಸೂಚನೆ ದೊರೆತಿದೆ.
ಇತ್ತೀಚಿಗೆ ಸ್ವಯಂಸೇವಕರು ಹಾಗೂ ಶ್ರಮಿಕ ವರ್ಗಕ್ಕೆ ಶ್ರಮಿಕರ ಸಮಾವೇಶ ಮತ್ತು ಮಹಿಳಾ ಸ್ವಯಂಸೇವಕರಿಗಾಗಿ ಮಾತೃ ಸಮಾವೇಶ, ಅಲ್ಲಲ್ಲಿ ಕಾರ್ನರ್ ಮೀಟಿಂಗ್ ಗಳನ್ನು ನಡೆಸಿ ಕಳ್ಳಿಗೆ, ತುಂಬೆ, ಬಿ.ಮೂಡ ಮತ್ತು ನಡು ಗ್ರಾಮಸ್ಥರಿಗೆ ಮಾಹಿತಿಗಳನ್ನು ನೀಡಲಾಗಿತ್ತು. ಬಂಟ್ವಾಳದ
ಹೃದಯ ಭಾಗವಾದ ಬಿ.ಸಿ.ರೋಡಿನಿಂದ ಫರಂಗಿಪೇಟೆಯವರೆಗೂ ವ್ಯಾಪ್ತಿಯನ್ನು ಹೊಂದಿರುವ ನಾಲ್ಕು ಗ್ರಾಮಗಳ ಮಾಗಣೆಯ ಭಕ್ತರು ಮಾತ್ರವಲ್ಲದೆ ಹೊರಗಿನಿಂದಲೂ ಕರಸೇವಕರು ಆಗಮಿಸುತ್ತಿದ್ದು, ದೇವಳದ ಆವರಣದಲ್ಲಿ ಜಾತ್ರೆಯ ಕಳೆ ಕಂಡುಬರುತ್ತಿದೆ. ಸಂಜೆ ವೇಳೆಗೆ ಸಾವಿರಕ್ಕೂ ಅಧಿಕ ಸ್ವಯಂಸೇವಕರು ಭಾಗವಹಿಸುವ ನಿರೀಕ್ಷೆ ಇದೆ.













