ಬಂಟ್ವಾಳ :ರಾಧಾ ಸುರಭಿ ಗೋಮಂದಿರ ಗೋವಿನತೋಟ ಪುದು, ಬಂಟ್ವಾಳ ಇಲ್ಲಿ ಸೆಪ್ಟೆಂಬರ್ 7 ರಿಂದ 21ರ ತನಕ ನಡೆಯಲಿರುವ ಪಿತೃ ಪಕ್ಷ ಆಚರಣೆ- “ಪಿತೃ ತರ್ಪಣ” ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಸೆ. 7ರಂದು ನಡೆಯಿತು.
ವಿದ್ವಾನ್ ಶ್ರೀ ಕೃಷ್ಣರಾಜ್ ಭಟ್ ಕುತ್ಪಾಡಿ ಉದ್ಘಾಟಿಸಿ, ಪಿತೃ ಪಕ್ಷದ ಮಹತ್ವದ ಬಗ್ಗೆ ಉಪನ್ಯಾಸವನ್ನು ನೀಡಿದರು. ಹಿಂದೂ ಸನಾತನ ಧರ್ಮದಲ್ಲಿ ಪಿತೃ ಪಕ್ಷದಲ್ಲಿ ಪಿತೃ ತರ್ಪಣ ಮಾಡುವುದು ಕಡ್ಡಾಯವಾದ ಆಚರಣೆ, ಇದು ಎಲ್ಲರೂ ಮಾಡಲೇ ಬೇಕಾದ ವಿಧಿ.ಇದು ಕೇವಲ ಆಯ್ಕೆಯಲ್ಲ, ಮಾಡಲೇಬೇಕಾದ ಕ್ರಮ. ಬೇರೆ ಯಾವ ದೇವತಾ ಕಾರ್ಯ ಮಾಡದಿದ್ದರೂ ಯಾರೂ ಕೇಳುವುದಿಲ್ಲ, ಆದರೆ ಪಿತೃ ತರ್ಪಣೆ ಮಾತ್ರ ಕಡ್ಡಾಯ ಆಚರಣೆ. ಆದ್ದರಿಂದ ಈ ಕಾರ್ಯಕ್ರಮದ ಪ್ರಯೋಜನವನ್ನು ಸರ್ವರು ಪಡೆಯಬೇಕೆಂದು ತಿಳಿಸಿದರು.
ರಾಧ ಸುರಭಿ ಗೋಮಂದಿರದ ಅಧ್ಯಕ್ಷರಾದ ಶ್ರೀ ಭಕ್ತಿ ಭೂಷಣ್ ದಾಸ್ ಪ್ರಭುಜಿ ಮಾತನಾಡಿ ಪಿತೃ ದೋಷ ನಿವಾರಣಾರ್ಥವಾಗಿ ಪಿತೃ ಪಕ್ಷದ ಆಚರಣೆ. ಸನಾತನ ಹಿಂದೂ ಧರ್ಮದ ಧರ್ಮ ಶಾಸ್ತ್ರದ ಪ್ರಕಾರ 5
ಋಣಗಳಿವೆ, ಪಿತೃ ಋಣ, ದೇವ ಋಣ, ಋಷಿ ಋಣ, ಮನುಷ್ಯ ಋಣ ಮತ್ತು ಭೂತ ಋಣ, ಅದರಲ್ಲಿ ಪಿತೃ ಋಣ ತೀರಿಸದಿದ್ದರೆ ಯಾವ ಧರ್ಮ ಕಾರ್ಯಗಳು ಪೂರ್ಣಗೊಳ್ಳುವುದಿಲ್ಲ. ಪಿತೃ ಋಣ ತೀರಿಸಿದರೆ ಸಮಸ್ತ ಕಷ್ಟಗಳು, ದುಃಖಗಳು, ಕ್ಲೇಶಗಳು ನಿವಾರಣೆಯಾಗಿ ದೇವಾನುದೇವತೆಗಳ ಅನುಗ್ರಹ ನಮಗೆ ಸಿಗುತ್ತದೆ ಎಂದು ತಿಳಿಸಿದರು.
ಪ್ರವೀಣ ಶೆಟ್ಟಿ ಸುಜೀರು ಕಾರ್ಯಕ್ರಮ ನಿರೂಪಿಸಿದರು, ಅನಿಲ್ ಪಂಡಿತ್ ಬ್ರಹ್ಮರಕೂಟ್ಲು ಧನ್ಯವಾದ ಸಮರ್ಪಿಸಿದರು. ಪ್ರಮುಖರಾದ ರಮಾನಂದ ಶೆಟ್ಟಿ ಬೆಂಜನಪದವು, ರಾಮಚಂದ್ರ ಬಂಗೇರ ದೇವಸ್ಯ, ದಾಮೋದರ ನೆತ್ರಕೆರೆ, ಗಂಗಾಧರ ಪೆರ್ಮಾಂಕಿ, ವಿಶ್ವನಾಥ್ ನೆತ್ರಕರೆ, ಎಕೆ ಗಿರೀಶ್ ಶೆಟ್ಟಿ ಕುಂಪನಮಜಲು, ವಿನಯ ಕುಮಾರ್ ಕಡೆಗೋಳಿ, ಉಮಾ ಚಂದ್ರಶೇಖರ್ ತುಂಬೆ, ಸಂದೇಶ್ ಬ್ರಹ್ಮರಕೂಟ್ಲು, ನವೀನ್ ಕೋಡಿ ಮತ್ತಿತರರು ಉಪಸ್ಥಿತರಿದ್ದರು.















