Coastal Bulletin

ಮಂಗಳೂರು : ಆಟಿ ಅಮಾವಾಸ್ಯೆ ಅಂದರೆ ತುಳುನಾಡಿನಲ್ಲಿ ಒಂದು ರೀತಿಯ ಹಬ್ಬದ ಆಚರಣೆ, ಆಟಿ ಅಮಾವಾಸ್ಯೆ ಮುಗಿದ ಬಳಿಕ ಎಲ್ಲಾ ಹಬ್ಬಗಳಿಗೆ ಮುನ್ನುಡಿ ಎಂಬಂತೆ ಶ್ರಾವಣ ಬರುತ್ತದೆ, ಸಾಲು-ಸಾಲು ಹಬ್ಬಗಳು ಶುರುವಾಗುತ್ತದೆ. ಆಟಿ ಅಮಾವಾಸ್ಯೆಗೆ ಪಾಲೆ ಮರದ ತೊಗಡೆಯಿಂದ ಮಾಡಿದ ಮದ್ದು ಕುಡಿದರೆ ಹಲವಾರು ಪ್ರಯೋಜನಗಳಿವೆ ಎಂಬ ನಂಬಿಕೆ ಇದೆ.

ತುಳುನಾಡಿನಲ್ಲಿಂದು ಆಟಿ ಅಮಾವಾಸ್ಯೆಯ ಸಡಗರ. ಇಂದು ತುಳುನಾಡಿನ ಯಾವುದೇ ದೇವಾಲಯ, ಮನೆಗಳಿಗೆ ಹೋದರೆ ಆಟಿ ಮದ್ದು ನೀಡುತ್ತಾರೆ. ಹಾಲೆ ಮರದ ತೊಗಟೆಯನ್ನು ಸೂರ್ಯನ ಕಿರಣಗಳು ಬೀಳುವ ಮುನ್ನ ಕಲ್ಲಿನಿಂದ ಕೆತ್ತಿ ತಂದು ಅದರಿಂದ ಕಷಾಯ ಮಾಡಲಾಗುವುದು.


ಆಟಿ ಅಮಾವಾಸ್ಯೆಯ ಹಿಂದಿನ ದಿನ ಮರಕ್ಕೆ ನೂಲು ಕಟ್ಟಿ' ನಾಳೆ ಬರುತ್ತೇನೆ ಮದ್ದು ಸಿದ್ಧ ಮಾಡಿ ಇಡು' ಎಂದು ವನದೇವತೆಯನ್ನುಪ್ರಾರ್ಥಿಸಿ ಬರುವ ಪದ್ಧತಿ ಇದೆ. ಸೂರ್ಯ ಹುಟ್ಟುವ ಮುನ್ನ ಗಂಡಸರು ಬೆತ್ತಲೆ ಹೋಗಿ ಪಾಲೆ ಮರದ ಬಳಿ ಹೋಗಿ ಕಲ್ಲಿನಿಂದ ತೊಗಟೆಯನ್ನು ಜಜ್ಜಿ ತರಬೇಕು ಎಂದು ಹೇಳಲಾಗುತ್ತದೆ. ಆದರೆ ಈಗ ಬೆತ್ತಲೆಯೇನು ಹೋಗುವುದಿಲ್ಲ.

ಬೆತ್ತಲೆಯಾಗಿ ಏಕೆ ಹೋಗಬೇಕು?

ಈ ಕುರಿತು ಹಿರಿಯರಲ್ಲಿ ಕೇಳಿದಾಗ ತಿಳಿದು ಬಂದ ಆಸಕ್ತಿಕರ ಸಂಗತಿ ಎಂದರೆ ಆಟಿ ಮದ್ದನ್ನು ಸೂರ್ಯನ ಕಿರಣಗಳು ಬೀಳುವ ಮುನ್ನ ತಂದರೆ ಅದರಲ್ಲಿ ಮದ್ದಿನ

ಶಕ್ತಿ ಅಧಿಕವಿರುತ್ತದೆ. ಆದ್ದರಿಂದ ಸೂರ್ಯ ಹುಟ್ಟುವ ಮುನ್ನ ಹೋಗಿ ತರಬೇಕು. ಹಿಂದಿನವರು ಬೆತ್ತಲೆ ಹೋಗಿ ತರಬೇಕೆಂದು ಏಕೆ ಹೇಳುತ್ತಿದ್ದರೆಂದರೆ ಸೂರ್ಯನ ಕಿರಣಗಳು ಬೀಳುವ ಮುನ್ನ ಹೋಗಿ ಮದ್ದು ತರಬೇಕೆಂಬ ಉದ್ದೇಶದಿಂದ ಅಷ್ಟೇ. ಬೆತ್ತಲೆ ಹೋದರೆ ಬೆಳಕು ಬೀಳುವ ಮುನ್ನ ಮನೆ ತಲುಪಬಹುದೆಂಬ ಲೆಕ್ಕಾಚಾರ.ಇನ್ನು ಇದಕ್ಕೆ ಬೇರೆ ಯಾವುದೇ ಕಾರಣವಿದೆಯೇ ಎಂಬುವುದು ಗೊತ್ತಿಲ್ಲ.

ಕಷಾಯ ಮಾಡುವುದು ಹೇಗೆ?

ಕರಿಮೆಣಸು, ಜೀರಿಗೆ, ಓಮಕ್ಕಿ, ಬೆಳ್ಳುಳ್ಳಿ ಜತೆ ಅರೆದು ಮಿಶ್ರಣ ಮಾಡಿ ಬೊರ್ಗಲ್ (ಬೆಣಚು ಕಲ್ಲು) ಬಿಸಿ ಮಾಡಿ ಮುಳುಗಿಸಿ ನಂತರ ಅದಕ್ಕೆ ಒಗ್ಗರಣೆ ಕೊಟ್ಟು ಮನೆ ಮಂದಿಗೆಲ್ಲಾ ಖಾಲಿ ಹೊಟ್ಟೆಯಲ್ಲಿ ಕುಡಿಯಲು ನೀಡುತ್ತಾರೆ.ಈ ಮದ್ದಿನಲ್ಲಿಸಾವಿರದೊಂದು ಬಗೆಯ ಔಷಧಿಗಳು ಇರುತ್ತವೆ ಎಂಬ ನಂಬಿಕೆ ಇದೆ.ಈ ಮರ ಹೂ ಬಿಟ್ಟಾಗ ಆ ಮರದ ಬಳಿ ಹೋದರೆ ಅಮಲೇರಿದ ಅನುಭವ ಉಂಟಾಗುವುದು. ಮನುಷ್ಯ ಬಿಟ್ಟು ದುಂಬಿಗಳು ಈ ಮರದ ಬಳಿ ಸುಳಿಯುವುದಿಲ್ಲ.

Leave a Comment