ಬಂಟ್ವಾಳ: ಪ್ರೇಮಿಯೊಬ್ಬ ಪ್ರಿಯತಮೆಯ ಮೇಲೆ ಹಲ್ಲೆ ಮಾಡಿ ಆ ಬಳಿಕ ನೇಣಿಗೆ ಶರಣಾದ ಘಟನೆ ತಾಲೂಕಿನ ಪುದು ಗ್ರಾಮದ ಸುಜೀರು ದೈಯಡ್ಕ ಎಂಬಲ್ಲಿ ಇಂದು ಮಧ್ಯಾಹ್ನದ ವೇಳೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕೊಡ್ಮಾಣ್ ಗ್ರಾಮದ ಕಾಂಜೀಲಕೋಡಿ ನಿವಾಸಿ (30) ವರ್ಷದ ಸುಧೀರ್ ಎಂದು ಗುರುತಿಸಲಾಗಿದೆ.
ಗಂಭೀರ ಗಾಯಗೊಂಡ ಯುವತಿ ದಿವ್ಯ ಯಾನೆ ದೀಕ್ಷಿತಾ(26) ಎಂಬಾಕೆಯನ್ನು ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇವರಿಬ್ಬರು ಕಳೆದ 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದ್ದು ಕೆಲ ತಿಂಗಳುಗಳಿಂದ ಮನಸ್ತಾಪವಿದ್ದು, ಮದುವೆಗೆ ಒತ್ತಾಯಿಸುತಿದ್ದ ವೇಳೆ ಮಾತಿಗೆ ಮಾತು ಬೆಳೆದು ಯಾವುದೋ ಕ್ಷುಲ್ಲಕ ಕಾರಣಕ್ಕೆ ಇಬ್ಬರ
ಮಧ್ಯೆ ಜಗಳ ನಡೆದಿದೆ. ಈ ಜಗಳ ವಿಕೋಪಕ್ಕೆ ತಿರುಗಿ ಸುಧೀರ್ ದಿವ್ಯ ಮೇಲೆ ಮನಬಂದಂತೆ ಥಳಿಸಿದ್ದು, ಯುವತಿ ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಆಕೆ ವಾಸವಿದ್ದ ಬಾಡಿಗೆ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ.
ಗಾಯಾಳು ದಿವ್ಯ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು.ಇತ್ತ ಯುವಕ ಸುಧೀರ್ ಈ ಹಿಂದೆ ಕೂಡ ಟವರ್ ಹತ್ತಿ ಈಕೆಯನ್ನು ಹೆದರಿಸಿದ್ದ ಅನ್ನುವ ಮಾಹಿತಿ ಇದೆ. ಸದ್ಯ ಬಂಟ್ವಾಳ ಗ್ರಾಮಾಂತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














