ಯಕ್ಷಗಾನ ಸೇವೆಗೆ ಗೌರವ: ಕಟೀಲು ಮೇಳದ ಸಾರಥಿ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಗೆ "ಪೊಳಲಿ ಯಕ್ಷೋತ್ಸವ ಪ್ರಶಸ್ತಿ"

Coastal Bulletin
ಯಕ್ಷಗಾನ ಸೇವೆಗೆ ಗೌರವ: ಕಟೀಲು ಮೇಳದ ಸಾರಥಿ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಗೆ "ಪೊಳಲಿ ಯಕ್ಷೋತ್ಸವ ಪ್ರಶಸ್ತಿ"

ಬಂಟ್ವಾಳ: ಶ್ರೀ ಕ್ಷೇತ್ರ ಪೊಳಲಿಯ ಪುಣ್ಯಭೂಮಿಯಲ್ಲಿ 1996ರಲ್ಲಿ ಸ್ಥಾಪನೆಗೊಂಡ ಯಕ್ಷ ಕಲಾ ಪೊಳಲಿ ಸಂಸ್ಥೆಯ 31ನೇ ವರ್ಷದ ಸಂಭ್ರಮಾಚರಣೆ ಅ. 11ರಂದು ಭಾನುವಾರ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರತಿವರ್ಷ ನೀಡಲಾಗುವ ಪೊಳಲಿ ಯಕ್ಷೋತ್ಸವ ಪ್ರಶಸ್ತಿ-2026ನ್ನು ಈ ಬಾರಿ ಶ್ರೀ ಕಟೀಲು ಯಕ್ಷಗಾನ ಮೇಳದ ಸಂಚಾಲಕ ಹಾಗೂ ಕಲ್ಲಾಡಿ ಮನೆತನದ ಉತ್ತರಾಧಿಕಾರಿ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಕಲ್ಲಾಡಿ ಮನೆತನವು ಕಳೆದ 90 ವರ್ಷಗಳಿಂದ ಶ್ರೀ ಕಟೀಲು ಯಕ್ಷಗಾನ ಮೇಳದ ಸಂಚಾಲಕತ್ವವನ್ನು ವಹಿಸಿಕೊಂಡು ಯಶಸ್ವಿಯಾಗಿ ಮುನ್ನಡೆಸುತ್ತಿದೆ. ಒಂದು ಮೇಳದಿಂದ ಏಳು ಮೇಳಗಳವರೆಗೆ ವಿಸ್ತರಿಸಿದ ಕೀರ್ತಿಯೂ ಕಲ್ಲಾಡಿ ಮನೆತನಕ್ಕೆ ಸಲ್ಲುತ್ತದೆ.

ಕೀರ್ತಿಶೇಷ ಕಲ್ಲಾಡಿ ಕೊರಗ ಶೆಟ್ಟಿ ಹಾಗೂ ಕಲ್ಲಾಡಿ ವಿಠ್ಠಲ ಶೆಟ್ಟಿಯವರು ಮುನ್ನಡೆಸಿಕೊಂಡು ಬಂದ ಶ್ರೀ ಕಟೀಲು ಮೇಳದ ಯಜಮಾನಿಕೆಯನ್ನು ಪ್ರಸ್ತುತ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಕಲ್ಲಾಡಿ

ಮನೆತನದ ಹಿರಿಯರ ಸೇವೆಯನ್ನು ಸ್ಮರಿಸಿಕೊಂಡು, ಯಕ್ಷಗಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಬಾರಿಯ ಪೊಳಲಿ ಯಕ್ಷೋತ್ಸವ ಪ್ರಶಸ್ತಿಯನ್ನು ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿಯವರಿಗೆ ನೀಡಲಾಗುತ್ತಿದೆ .

ಅಮ್ಮಣ್ಣಾಯ ಸ್ಮೃತಿ ಗೌರವ ಪ್ರಶಸ್ತಿ:

ಈ ವರ್ಷದಿಂದ ರಸರಾಗ ಚಕ್ರವರ್ತಿ ದಿನೇಶ್ ಅಮ್ಮಣ್ಣಾಯ ಸ್ಮೃತಿ ಗೌರವ ಪ್ರಶಸ್ತಿಯನ್ನು ಆರಂಭಿಸಲಾಗಿದ್ದು, ಹಿರಿಯ ಹಿಮ್ಮೇಳ ಗುರು ಹರಿನಾರಾಯಣ ಬೈಪಡಿತ್ತಾಯ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.

Leave a Comment