ಕಡೇಶ್ವಾಲ್ಯ: ಗ್ರಾಮ ಪಂಚಾಯಿತಿ ಹೆಗ್ಗಳಿಕೆ ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಕೆ

Coastal Bulletin
ಕಡೇಶ್ವಾಲ್ಯ: ಗ್ರಾಮ ಪಂಚಾಯಿತಿ ಹೆಗ್ಗಳಿಕೆ ಹಸಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಕೆ

ಬಂಟ್ವಾಳ: ಇಲ್ಲಿನ ಕಡೇಶ್ವಾಲ್ಯ ಗ್ರಾಮ ಪಂಚಾಯಿತಿ ಮಾತೃ ಸಂಜೀವಿನಿ ಒಕ್ಕೂಟದ ಮೂಲಕ ಕೈಗೊಂಡಿರುವ 'ಸ್ವಚ್ಛ ಸಂಕೀರ್ಣ' ಯೋಜನೆ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸುವ ಮೂಲಕ ಗಮನ ಸೆಳೆದಿದೆ.

ಕಳೆದ 2021ರಲ್ಲಿ ಈ ಗ್ರಾಮ ಪಂಚಾಯಿತಿ ಮತ್ತು ಸ್ಥಳೀಯ ಮಾತೃ ಸಂಜೀವಿನಿ ಒಕ್ಕೂಟವು ಪರಸ್ಪರ ಒಪ್ಪಂದದ ಮೂಲಕ ಈ ಸ್ವಚ್ಛ ಸಂಕೀರ್ಣ ನಿರ್ವಹಣೆ ಯೋಜನೆ ರೂಪಿಸಿ, ರಾಜ್ಯದಲ್ಲೇ ಮೊದಲ ಬಾರಿಗೆ ಮಹಿಳೆಯರೇ ತ್ಯಾಜ್ಯ ಸಂಗ್ರಹದ ವಾಹನ ಚಲಾಯಿಸಿ ಗಮನ ಸೆಳೆದಿದ್ದರು. ಈ ಗ್ರಾಮದಲ್ಲಿ ಸುಮಾರು 1,196 ಕುಟುಂಬಗಳಿದ್ದು, ಶೇ 80 ರಷ್ಟು ಮನೆಗಳಿಂದ ತ್ಯಾಜ್ಯ ಸಂಗ್ರಹ ನಡೆಯುತ್ತಿದೆ.

ಮಾತೃ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರೇಮಾ ನೇತೃತ್ವದಲ್ಲಿ ಮುಖ್ಯ ಪುಸ್ತಕ ಬರಹಗಾರ್ತಿ(ಎಂಬಿಕೆ) ಮಮತಾ, ಚಾಲಕಿ ಲಕ್ಷಿ, ಪ್ರಮೀಳಾ, ಸವಿತಾ ಇವರು ತ್ಯಾಜ್ಯ ವಿಂಗಡಣೆ ಕೆಲಸ ನಿರ್ವಹಿಸುತ್ತಿದ್ದು, ಪ್ರತಿ ಮನೆಗೂ ವಾರಕ್ಕೆ 2 ಬಾರಿ ಭೇಟಿ ನೀಡುತ್ತಿದ್ದಾರೆ. ರಸ್ತೆ ಸಂಪರ್ಕ ಇಲ್ಲದದ ಅಥವಾ ವಾಹನ ಓಡಾಟ ಸಾಧ್ಯವಾಗದ

ಕಡೆಗಳಲ್ಲಿ ಅಲ್ಲಿನ ಅಂಗನವಾಡಿ ಕೇಂದ್ರಕ್ಕೆ ತ್ಯಾಜ್ಯ ತಲುಪಿಸುವ ಜವಾಬ್ದಾರಿ ನಾಗರಿಕರದ್ದು. 

ಒಣ ಮತ್ತು ಹಸಿ ಕಸ ಬೇರ್ಪಡಿಸಿದ ಬಳಿಕ ಪ್ರತಿದಿನ ಸುಮಾರು 25 ಕಿಲೋ ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸಿ ಸ್ವಚ್ಛ ಸಂಕೀರ್ಣದ ಸುತ್ತಲೂ ಬೆಳೆದ ಬಾಳೆರ ಮತ್ತು ತರಕಾರಿ ಗಿಡಗಳಿಗೆ ಬಳಕೆಯಾಗುತ್ತಿದೆ. ಸುಮಾರು 150 ನೇಂದ್ರ ಬಾಳೆ ಗಿಡಗಳನ್ನು ನೆಡಲಾಗಿದ್ದು, ಈಗಾಗಲೇ ಬಾಳೆಗೊನೆಯಿಂದ ರೂ 35 ಸಾವಿರ ಆದಾಯ ಲಭಿಸಿದೆ. ಸೌತೆಕಾಯಿ, ಬೆಂಡೆ, ಬದನೆ, ಅಲಸಂಡೆ, ಹರಿವೆ, ಬಸಳೆ ಮತ್ತಿತರ ತರಕಾರಿ ಬೆಳೆಯಿಂದಲೂ ಸುಮಾರು ರೂ 25 ಸಾವಿರ ಮೊತ್ತದ ಆದಾಯ ಸಂಗ್ರಹಗೊಂಡಿದೆ. ಇಲ್ಲಿನ ಒಣ ತ್ಯಾಜ್ಯವನ್ನು ಎಂಆರ್ಎಫ್ ಘಟಕಕ್ಕೆ ನೀಡಲಾಗುತ್ತಿದೆ ಎಂದು ಪಿಡಿಒ ಸುನಿಲ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Leave a Comment