ಬಂಟ್ವಾಳ: ಇಲ್ಲಿನ ಬಡಗಬೆಳ್ಳೂರು ಗ್ರಾಮದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಹತ್ಯೆ ಮತ್ತು ಆಶ್ರಫ್ ವಯನಾಡು ಎಂಬಾತನ ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಸಿ.ರೋಡಿನ ಕೈಕಂಬ ಜಂಕ್ಷನ್ ಬಳಿ ಜು.4ರಂದು ಅಪರಾಹ್ನ ಎಸ್ ಡಿ ಪಿ ಐ ವತಿಯಿಂದ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆ ಮತ್ತು ಧ್ವನಿವರ್ಧಕ ಬಳಕೆಗೆ ನಗರ ಠಾಣೆ ಪೊಲೀಸರು ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸಂದೇಶ ರವಾನೆ ಮತ್ತು ಅಕ್ರಮ ಕೂಟ ರಚಿಸಿದ ಆರೋಪದಡಿ ಗುರುವಾರ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಜು.1ರಂದು ಸಂಜೆ ಇಲ್ಲಿನ ಬಿ.ಮೂಡ ಗ್ರಾಮ ನಿವಾಸಿ, ಎಸ್ ಡಿ ಪಿ ಐ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಮತ್ತು ಇನ್ನಿಬ್ಬರು ನಗರ ಠಾಣೆಗೆ ಆಗಮಿಸಿ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ವತಿಯಿಂದ ಧ್ವನಿವರ್ಧಕ ಬಳಕೆ ಸಹಿತ ಪ್ರತಿಭಟನೆ ನಡೆಸಲು ಅನುಮತಿ ಮತ್ತು ಸೂಕ್ತ ಭದ್ರತೆ ಒದಗಿಸಲು ಮನವಿ ಸಲ್ಲಿಸಿದ್ದರು. ಆದರೆ ಈ ಎರಡೂ ಪ್ರಕರಣಗಳಲ್ಲಿ ಸಕರ್ಾರ ಪರಿಹಾರ ಮೊತ್ತ ನೀಡದಿರುವ ಬಗ್ಗೆ ಮೃತರ ಕುಟುಂಬಸ್ಥರು ಅಥವಾ ಯಾರಾದರೂ ಮನವಿ ನೀಡಿರುತ್ತಾರೆಯೇ...? ಹಾಗೂ ಷತ್ಯಂತ್ರ ರೂಪಿಸಿದ ಆರೋಪಿತರ ಬಗ್ಗೆ ಯಾವುದಾದರೂ ಮಾಹಿತಿ ಅಥವಾ ಸಾಕ್ಷಿಗಳು ಇದೆಯೇ ಎಂದು ಪೊಲೀಸರು ಪ್ರಶ್ನಿಸಿದಾಗ ಮಾಹಿತಿ ಇಲ್ಲ ಎಂದಿದ್ದಾರೆ.
ಈ ಎರಡೂ ಘಟನೆಗಳಿಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದ್ದು, ಜಿಲ್ಲೆಯಲ್ಲಿ ಕಳೆದ ಸುಮಾರು ವರ್ಷಗಳಿಂದ ನಡೆದಿರುವ ಕೋಮು
ಸಂಬಂಧಿತ ಹತ್ಯೆ ಮತ್ತು ಸಂಘರ್ಷಗಳನ್ನು ಅವಲೋಕಿಸಿಕೊಂಡು ಕಾನೂನು ಹಾಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸೂಕ್ತ ಕಾನೂನು ತಿಳುವಳಿಕೆ ನೀಡಿ ಅನುಮತಿ ನಿರಾಕರಿಸಿ ಮನವಿದಾರರಿಗೆ ಪೊಲೀಸರು ಹಿಂಬರಹ ನೀಡಿದ್ದರು. ಈ ನಡುವೆ 'ಬ್ರೇಕಿಂಗ್ ನ್ಯೂಸ್ ಮೈಕಾಲ' ಎಂಬ ವಾಟ್ಸಾಪ್ ಗ್ರೂಪ್ ನಲ್ಲಿ 'ನ್ಯಾಯ ಮರೀಚಿಕೆ, ಹುಸಿಯಾದ ಭರವಸೆ' ಅಬ್ದುಲ್ ರಹಿಮಾನ್ ಮತ್ತು ವಯನಾಡ್ ಅಶ್ರಫ್ ಕೊಲೆ ಕೃತ್ಯದ ಪ್ರಮುಖ ಆರೋಪಿಗಳ ಬಂಧನದ ವಿಳಂಬ ಮತ್ತು ಪರಿಹಾರ ಘೋಷಿಸದ ಸಕರ್ಾರದ ನಡೆ ವಿರೋಧಿಸಿ ಶುಕ್ರವಾರ ಸಂಜೆ ಬಿ.ಸಿ.ರೋಡು ಕೈಕಂಬ ಜಂಕ್ಷನ್ ನಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ವಾಟ್ಸಾಪ್ ಮೂಲಕ ಸಾರ್ವಜನಿಕರಿಗೆ ಸುಳ್ಳು ಸಂದೇಶ ರವಾನಿಸಿದ್ದಾರೆ. ಮಾತ್ರವಲ್ಲದೆ ಅಂದು ಅಕ್ರಮ ಕೂಟ ಸೇರಿ ಅಪರಾಧ ಎಸಗಲು ವಾಟ್ಸಾಪ್ ಸಂದೇಶದ ಮೂಲಕ ದುಷ್ಪ್ರೇರಣೆ ನೀಡಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.














