ಯಾದವ ಕುಲಾಲ್ ಬಿ ಸಿ ರೋಡ್.

ಬಿ.ಸಿ.ರೋಡ್ : ಗ್ರಾಮ ಪಂಚಾಯತ್ ಕಾರ್ಯಾಲಯ ಇರಬೇಕಾದುದು ಆಯಾ ಗ್ರಾಮಸ್ಥರ ಅನುಕೂಲಕ್ಕಾಗಿ ಗ್ರಾಮದದಲ್ಲಿರುವ ಊರುಗಳ ಮದ್ಯದಲ್ಲಿ. ಆದರೆ ಇಲ್ಲೊಂದು ಗ್ರಾಮ ಪಂಚಾಯತ್ ಕಚೇರಿಗೆ ಹೋಗಬೇಕಾದರೆ ಎರಡು ಗ್ರಾಮಗಳನ್ನು ದಾಟಿ ನಂತರ ಒಂದು ಕಿ.ಮೀ ಪಾದಯಾತ್ರೆ ಮಾಡಬೇಕು. ಕಡಿಮೆ ಎಂದರೂ ಒಂದು ಭಾಗದ ಗ್ರಾಮಸ್ಥರಿಗೆ ಸುಮಾರು ೧೫ರಿಂದ ೧೮ ಕಿ.ಮೀಟರ್ ದೂರ ಸಂಚರಿಸಬೇಕು. ಸ್ವಂತ ವಾಹನ ಇದ್ದವರಿಗೆ ಮಾತ್ರ ತಮ್ಮ ಪಂಚಾಯತ್‌ನ ಕೆಲಸ ಮಾಡಲು ಸಾಧ್ಯ ಸ್ವಂತ ವಾಹನ ಇಲ್ಲದವರು ಎರಡು ಬಸ್ಸುಗಳಲ್ಲಿ ಸಂಚಾರ ಮಾಡಿದರೆ ಮಾತ್ರ ಪಂಚಾಯತ್ ತಲುಪಲು ಸಾಧ್ಯ

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾಮದ ಪಂಚಾಯತ್ ಕಚೇರಿ ಇರುವುದು ಬಂಟ್ವಾಳ ಮೂಡ, ಬಂಟ್ವಾಳ ಕಸ್ಬಾ, ಬಂಟ್ವಾಳ ಪುರಸಭೆ ವ್ಯಾಪ್ತಿ ಮತ್ತು ಅರಳ ಗ್ರಾಮ ಇದರ ಗಡಿ ಭಾಗದಲ್ಲಿ ಲೊರೆಟ್ಟೋ ಚರ್ಚ್ ಬಳಿ ಗ್ರಾಮ ಪಂಚಾಯತ್ ಕಾರ್ಯಾಲಯ ನಿರ್ಮಾಣವಾಗಿದೆ. ಬೆದ್ರಗುಡ್ಡೆ, ನಲ್ಕೆಮಾರ್, ಪಚ್ಚಿನಡ್ಕ, ಕಲ್ಪನೆ ಈ ಭಾಗದ ಜನರು ಪಂಚಾಯತ್‌ನ ಸವಲತ್ತುಗಳನ್ನು ಪಡೆಯಲು ಬಿ.ಸಿ.ರೋಡು ತನಕ ಒಂದು ಬಸ್ಸಿನಲ್ಲಿ ಬಂದು ನಂತರ ಮೂಡಬಿದ್ರೆ ಬಸ್ಸಿನಲ್ಲಿ ಸಂಚಾರ ಮಾಡಿ ಬಂಟ್ವಾಳ ಕಸ್ಬಾ ಗ್ರಾಮದ ದಾಟಿ ಲೊರೆಟ್ಟೋ ಚರ್ಚ್ ಎಂಬಲ್ಲಿ ಇಳಿದು ನಂತರ ಕಾಲು ದಾರಿಯಲ್ಲಿ ಒಂದು ಕಿಲೋ ಮೀಟರ್ ಸಂಚಾರ ಮಾಡಬೇಕು. ಅಮ್ಟಾಡಿ ಗ್ರಾಮಸ್ಥರಿಗೆ ಪಂಚಾಯತ್ ಕಾರ್ಯಾಲಯ ಸಂಪರ್ಕಿಸಲು ಗ್ರಾಮದೊಳಗೆ ಸುಸಜ್ಜಿತವಾದ ರಸ್ತೆ ಇದ್ದರೂ ಬಸ್ಸು ಸಂಚಾರದ ವ್ಯವಸ್ಥೆಯೂ ಇಲ್ಲ. ಸರ್ಕಾರದ ಬಹುತೇಕ ಕಾರ್ಯಕ್ರಮಗಳು ಈಗ ಗ್ರಾಮ ಪಂಚಾಯತ್ ಕಚೇರಿಯಿಂದಲೇ ವಿಲೇವಾರಿ ಆಗುತ್ತಿರುವುದರಿಂದ ಇಲ್ಲಿನ ಹಿರಿಯ ನಾಗರೀಕರಿಗೆ, ವೃದ್ಧರಿಗೆ, ಅಂಗವಿಕಲರಿಗೆ ಇಷ್ಟು ದೂರ ರಿಕ್ಷಾ ಬಾಡಿಗೆ ಕೊಟ್ಟು ಬರುವುದು ಸುಲಭದ ಮಾತಲ್ಲ.

ಅಮ್ಟಾಡಿ ಗ್ರಾಮದಲ್ಲಿ ಸುಮಾರು ಐದು ಸಾವಿರದ ಆರು ನೂರು ಜನಸಂಖ್ಯೆ ಹಾಗೂ ಕೂರಿಯಾಳ ಗ್ರಾಮದಲ್ಲಿ ಕೇವಲ ಎರಡು ಸಾವಿರ ಮುನ್ನೂರು ಹೊಂದಿರುತ್ತದೆ. ಅಮ್ಟಾಡಿ ಗ್ರಾಮದ ವಿಸ್ತೀರ್ಣ ೨೬೦೦ ಎಕ್ರೆ ವಿಸ್ತೀರ್ಣ ಮತ್ತು ಕೂರಿಯಾಳ ಗ್ರಾಮ ೨೦೯೯ ಎಕ್ರೆ ವಿಸ್ತೀರ್ಣ ಭೂಮಿಯನ್ನು ಹೊಂದಿರುತ್ತದೆ. ಅಮ್ಟಾಡಿ ಗ್ರಾಮದಲ್ಲಿ ಹೆಚ್ಚು ಜನಸಂಖ್ಯೆ ಇದ್ದರೂ ಪಂಚಾಯತ್ ಒಂದು ಮೂಲೆಯಲ್ಲಿ ಗ್ರಾಮಪಂಚಾಯತ್ ಕಾರ್ಯಾಲಯ ನಿರ್ಮಾಣ ಮಾಡಲಾಗಿದೆ. ಬಿ.ಸಿ.ರೋಡಿನಿಂದ ಪೊಳಲಿ ಕಡೆ ಹೊರಟರೆ

ಮೊಡಂಕಾಪುವಿನಿಂದ ಶುರು ಆಗಿ ಬೆಂಜನಪದವು ಕಲ್ಪನೆ ವರೆಗೆ. ಈ ಕಡೆ ಕಾಮಾಜೆಯಿಂದ ಆರಂಭಗೊಂಡು ಲೊರೆಟ್ಟೊ, ಸೊರ್ನಾಡು, ಎರ್ಮಾಳು ವರೆಗೆ ಈ ಗ್ರಾಮ ವ್ಯಾಪಿಸಿದೆ. ಅಮ್ಟಾಡಿ ಗ್ರಾಮ ಪಂಚಾಯತ್ ಕಾರ್ಯಾಲಯವು ೧.೨೭ ಎಕ್ರೆ ಸೆಂಟ್ಸ್ ವಿಸ್ತೀರ್ಣ ಒಳಗೊಂಡಿದೆ.

ಗ್ರಾಮ ಪಂಚಾಯಿತಿ ರಚನೆ ಆಗುವುದಕ್ಕಿಂತ ಮುಂಚೆ ಮಂಡಲ ಪಂಚಾಯತ್‌ಗಳು ಅಸ್ಥಿತ್ವದಲ್ಲಿದ್ದಾಗ ಕಚೇರಿಗಳು ಗ್ರಾಮ ಮದ್ಯೆ ಕೆಂಪುಗುಡ್ಡೆ ಮತ್ತು ಕುರಿಯಾಳ ಪ್ರದೇಶದಲ್ಲೇ ಇತ್ತು. ೧೯೯೧ರಲ್ಲಿ ಕುರಿಯಾಳ ಮತ್ತು ಅಮ್ಟಾಡಿ ಗ್ರಾಮವನ್ನು ಒಟ್ಟು ಸೇರಿಸಿ ನೂತನ ಗ್ರಾಮ ಪಂಚಾಯತ್ ಕಾರ್ಯಾಲಯ ಮಾಡಿರುವುದರಿಂದ ಅಮ್ಟಾಡಿ ಗ್ರಾಮದ ಗ್ರಾಮಸ್ಥರು ತೊಂದರೆ ಅನುಭವಿಸುತ್ತಿದ್ದಾರೆ. ಕಲ್ಪನೆಯಿಂದ ನಲ್ಕೆಮಾರ್ ಇಲ್ಲವೇ ಕೆಂಪುಗುಡ್ಡೆ-ಅಜೆಕಲವಾಗಿ ಬಂಟ್ವಾಳ ಬೈಪಾಸ್ ರಸ್ತೆಗೆ ಕೂಡು ರಸ್ತೆ ಇದ್ದು ಈ ಭಾಗದಲ್ಲಿ ದಿನದಲ್ಲಿ ಎರಡು ಹೊತ್ತು ಬಸ್ಸು ಸಂಚಾರ ಮಾಡಿದರೆ ಈ ಭಾಗದ ಗ್ರಾಮಸ್ಥರಿಗೆ ಸ್ವಲ್ಪ ಅನುಕೂಲವಾಗಬಹುದು. ಇಲ್ಲವೇ ಪಂಚಾಯತ್‌ನಲ್ಲಿರುವ ಸೇವೆಗಳನ್ನು ಗ್ರಾಮಸ್ಥರಿಗೆ ಮುಟ್ಟಿಸಲು ಗ್ರಾಮಸ್ಥರಿರುವಲ್ಲಿಯೇ ಪಂಚಾಯತ್ ಸೇವೆ ಸಿಕ್ಕಿದರೆ ಉತ್ತಮ.

"ಎಲ್ಲೋ ಇದೆ ಅಮ್ಟಾಡಿ ಗ್ರಾಮ ಪಂಚಾಯತ್ ಕಚೇರಿ. ಇದರಿಂದ ನಮ್ಮ ಭಾಗದ ಜನರಿಗೆ ತೊಂದರೆಯೇ ಸರಿ. ಯಾಕೆಂದರೆ ವಾಹನ ಇಲ್ಲದವರು ಎರಡು ಬಸ್ಸುಗಳಲ್ಲಿ ಸಂಚಾರ ಮಾಡಿಯೇ ಪಂಚಾಯತ್ ಸೇರಲು ಸಾಧ್ಯ ಗ್ರಾಮ ಪಂಚಾಯತ್ ಕಚೇರಿ ಇರುವುದು ಲೊರೆಟ್ಟೊ ಪದವಿನಿಂದ ಒಂದು ಕಿಲೋಮೀಟರ್ ಒಳಗೆ ಇರುವ ಒಂದು ಕಟ್ಟಡದಲ್ಲಿ. ಗ್ರಾಮ ಪಂಚಾಯತ್ ಕಚೇರಿಗೆ ಹೋಗಬೇಕೆಂದರೆ ಇಲ್ಲಿನ ಗ್ರಾಮಸ್ಥರಿಗೆ ೧೫ ಕಿಲೋಮೀಟರ್ ಸುತ್ತಾಡಿ ಹೋಗಬೇಕು. ಇನೈದು ಕಿಲೋಮೀಟರ್ ಹೋದರೆ ಮಂಗಳೂರು ಡಿಸಿ ಕಚೇರಿಯೇ ಇವರಿಗೆ ಹತ್ತಿರ".

 -ನಿತೇಶ್, ಕೆಂಪುಗುಡ್ಡೆ.


Leave a Comment