ಬಂಟ್ವಾಳ :ಸಕ್ರಮ ಮರಳುಗಾರಿಕೆಗೆ ತಹಶಿಲ್ದಾರ್ ನೇತೃತ್ವದಲ್ಲಿ ನಾಲ್ಕು ಕಡೆ ಸ್ಥಳ ಪರಿಶೀಲನೆ.

Coastal Bulletin
ಬಂಟ್ವಾಳ :ಸಕ್ರಮ ಮರಳುಗಾರಿಕೆಗೆ ತಹಶಿಲ್ದಾರ್ ನೇತೃತ್ವದಲ್ಲಿ ನಾಲ್ಕು ಕಡೆ ಸ್ಥಳ ಪರಿಶೀಲನೆ.

ಬಂಟ್ವಾಳ: ಸರಕಾರದ ಸುತ್ತೊಲೆಯಂತೆ ಬಂಟ್ವಾಳ ‌ತಾಲೂಕಿನ ಆಯ್ದ ನಾಲ್ಕು ಜಾಗದಲ್ಲಿ ನೇತ್ರಾವತಿ ನದಿಯಿಂದ ಸಕ್ರಮವಾಗಿ ಮರಳು ತೆಗೆಯಲು ಅವಕಾಶ ನೀಡುವ ಉದ್ದೇಶದಿಂದ ಬಂಟ್ವಾಳ ತಹಶಿಲ್ದಾರ್ ನೇತ್ರತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ‌ನಡೆಸಿದ್ದಾರೆ.

ಈ ಸಂದರ್ಭದಲ್ಲಿ ವಿವಿಧ ಮರಳು ಮೂಲಗಳ ಜಲಸಂಪನ್ಮೂಲ ಇಲಾಖೆಯ ( ಸಣ್ಣ ನೀರಾವರಿ ಮತ್ತು ಅಂರ್ಜಲ) ಇಂಜಿನಿಯರ್ ಡಾ.ಆನಂದ್ ಬಂಜನ್, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿ ಡಾ.ಮಾದೇಶ್ವರ, ಆರ್.ಟಿ.ಒ ಪ್ರಮೋದ್ ಭಟ್, ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅವಿನಾಶ್, ಪೊಲಿಸ್ ಸಿಬಂಧಿ ಕೃಷ್ಣ, ಬರಿಮಾರು ಪಿಡಿಒ. ಪುಷ್ಪಾ, ಸರಪಾಡಿ ಪಿಡಿಒ ಸಿಲ್ಬಿಯಾ ಪೆರ್ನಾಂಡಿಸ್, ಕರಿಯಂಗಳ ಪಿಡಿಒ ವಸಂತಿ, ನಾವೂರ ಪಿಡಿಒ ರಾವರ್ಟ್ ಪೆರ್ನಾಂಡಿಸ್ ಅವರು ಹಾಜರಿದ್ದರು.

ಹೊಸ ಮರಳು ನೀತಿಯನ್ವಯ ಅಧಿಕೃತವಾಗಿ ನೇತ್ರಾವತಿ ನದಿಯಿಂದ ಮರಳು ತೆಗೆಯಲು ಅವಕಾಶ ನೀಡಿದ್ದೇ ಆದರೆ, ಬಹು ತಿಂಗಳಿನಿಂದ ಮರಳಿಲ್ಲದೆ, ಸೊರಗಿ ಹೋಗಿದ್ದ ತಾಲೂಕಿನ ಜನರ ಬೇಡಿಕೆ ಬಹುಪಾಲು ಈಡೇರಿದಂತೆ, ಮರಳು ಇಲ್ಲದೆ ಅರ್ಧಕ್ಕೆ ನಿಂತಿದ್ದ ವಾಸದ ಮನೆ ಸಹಿತ ಅನೇಕ ಕಾಮಗಾರಿಗಳಿಗೆ ಮರುಜೀವ ನೀಡಿದಂತಾಗುತ್ತದೆ.ಕರಾವಳಿಯ ಬಡಜನರ ಅರ್ಥಿಕ ವ್ಯವಸ್ಥೆಯಲ್ಲೂ ಸುಧಾರಣೆ ಕಾಣಲು ಸಾಧ್ಯವಾಗಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ಬಂಟ್ವಾಳ ತಾಲೂಕು ಕರಿಯಂಗಳ, ಬರಿಮಾರು,

ನಾವೂರು ಮತ್ತು ಸರಪಾಡಿ ಗ್ರಾಮದಲ್ಲಿ ಮರಳು ಬ್ಲಾಕ್‌ನ್ನು ಗುರುತಿಸಲು ಜಂಟಿ ಸ್ಥಳ ತನಿಖೆ ನಡೆಸಿ,ವರದಿ ಸಲ್ಲಿಸುವಂತೆ ಸೂಚನೆಯನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ  ಬಂಟ್ವಾಳ ತಾಲೂಕು ಕರಿಯಂಗಳ, ಬರಿಮಾರು, ನಾವೂರು ಮತ್ತು ಸರಪಾಡಿ ಗ್ರಾಮದ ಕ್ರಮವಾಗಿ ಸ. ನಂ 46, 1/*, 97 ಮತ್ತು 104 ರಲ್ಲಿ ಕರ್ನಾಟಕ ಹೊಸ ಮರಳು ನೀತಿ-2020 ನ್ನು ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಗಳು 1994 ರ ತದ್ದುಪಡಿ 2021 ರನ್ವಯ ಅನುಷ್ಟಾನಗೊಳಿಸಲು ಮರಳನ್ನು ತೆಗೆಯುವ ಉದ್ದೇಶಕ್ಕೆ ನಿರಾಕ್ಷೇಪಣಾ ಪತ್ರ ನೀಡುವ ಬಗ್ಗೆ ಜಂಟಿ ಸ್ಥಳ ತನಿಖೆ ನಡೆಸಿ ವರದಿ ನೀಡುವ ಉದ್ದೇಶದಿಂದ ಸಂಬಂಧಿಸಿದ ಎಲ್ಲಾ ಅಧಿಕಾರಿಗಳ ಜೊತೆ ಬಂಟ್ವಾಳ ತಹಶಿಲ್ದಾರ್ ಮಂಜುನಾಥ್ ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮರಳು ತೆಗೆಯಲು ಗುರುತಿಸುವ ಜಾಗ ಸರಕಾರದ ನಿಯಮದಂತೆ ಸೂಕ್ತವಾಗಿದೆಯಾ? ಎಂಬುದನ್ನು ಖಾತರಿಪಡಿಸಿ ಬಳಿಕ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಿದ ಬಳಿಕ ಒಂದಷ್ಟು ಕ್ರಮಗಳು ನಡೆದು ಮುಂದೆ ಅವಕಾಶ ನೀಡಲಾಗುತ್ತದೆ.


Leave a Comment