ಬಂಟ್ವಾಳ: ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಆಮ್ಟೂರು ‘ಸ್ಪಂದನ ಸಮಾಜ ಸೇವಾ ಸಂಘ’ದ ವತಿಯಿಂದ ‘ನನ್ನ ಗ್ರಾಮ–ಸ್ವಚ್ಛ ಗ್ರಾಮ’ ಎಂಬ ಧ್ಯೇಯವಾಕ್ಯದೊಂದಿಗೆ ಸ್ವಚ್ಛತಾ ಆಂದೋಲನ ನಡೆಯಿತು.
ಆಮ್ಟೂರು ಜಂಕ್ಷನ್‌ನಿಂದ ರಾಯಪ್ಪಕೋಡಿ ರೈಲ್ವೆ ಅಂಡರ್‌ಪಾಸ್‌ವರೆಗೆ ಸುಮಾರು 2 ಕಿ.ಮೀ. ಉದ್ದದ ಮುಖ್ಯ ರಸ್ತೆಯ ಬದಿಯಲ್ಲಿ ಬಿಸಾಡಲಾಗಿದ್ದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ
ಹಮ್ಮಿಕೊಳ್ಳಲಾಗಿತ್ತು.
ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. ಗೋಳ್ತಮಜಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುನೀಲ್ ಕುಮಾರ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿದ್ಯಾಶ್ರೀ ಹಾಗೂ ಒಕ್ಕೂಟದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಘದ ಕಾರ್ಯವನ್ನು ಶ್ಲಾಘಿಸಿ ಅಭಿನಂದಿಸಿದರು.












