ಬೆಂಗಳೂರು: ವಾರದಲ್ಲಿ ಮೂರು ದಿನ ಸೋಮವಾರ, ಬುಧವಾರ ಮತ್ತು ಶುಕ್ರವಾರ ಮಾತ್ರ ಮಂಗಳೂರಿನಿಂದ ಬೆಂಗಳೂರಿನ ಯಶವಂತಪುರಕ್ಕೆ ಸಂಚರಿಸುತ್ತಿದ್ದ ನಂ.16576 ಎಕ್ಸ್ ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಸಾರ್ವಜನಿಕರು ಬಹುದಿನಗಳಿಂದ ಮನವಿ ಮಾಡುತ್ತಿದ್ದರು. ಇದೀಗ ಸಾರ್ವಜನಿಕರ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ ನಂ.16576 ಎಕ್ಸ್ ಪ್ರೆಸ್ ರೈಲಿನ (Mangaluru Train Timings) ವೇಳಾಪಟ್ಟಿಯನ್ನು ಬದಲಾಯಿಸಿದೆ. ನವೆಂಬರ್ 1ರಿಂದ ಅದು ಜಾರಿಗೆ ಬರಲಿದೆ. ಈ ಮೂಲಕ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ರೈಲ್ವೆ ಸಹಾಯಕ ಸಚಿವ ವಿ ಸೋಮಣ್ಣ ಅವರು ಎಕ್ಸ್ ಮೂಲಕ ಈ ಮಾಹಿತಿ ನೀಡಿದ್ದಾರೆ.
ಈಗಿನ ರೈಲ್ವೆ ವೇಳಾಪಟ್ಟಿಯ ಪ್ರಕಾರ, ಈ ರೈಲು ಬೆಳಗ್ಗೆ 11:30ಕ್ಕೆ ಮಂಗಳೂರಿನಿಂದ ಹೊರಟು ರಾತ್ರಿ 8:45ರ ಸುಮಾರಿಗೆ ಯಶವಂತಪುರ ರೈಲು ನಿಲ್ದಾಣವನ್ನು ತಲುಪುತಿತ್ತು. ಇನ್ನು ಮುಂದಿನ ದಿನಗಳಲ್ಲಿ ಈ ರೈಲು ಬೆಳಗ್ಗೆ 7 ಗಂಟೆಗೆ ಮಂಗಳೂರಿನಿಂದ ಹೊರಟು ಸಂಜೆ 4.30ಕ್ಕೆ ಬೆಂಗಳೂರಿನ ಯಶವಂತಪುರ ತಲುಪಲಿದೆ. ಈ
ವರ್ಷದ ನವೆಂಬರ್ 1ರಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೊಸ ವೇಳಾಪಟ್ಟಿ ಜಾರಿಗೆ ಬರಲಿದೆ. ಹಾಗಾಗಿ ಇದುವರೆಗೆ ಬೆಳಗ್ಗೆ ತಡವಾಗಿ ಹೊರಟು, ರಾತ್ರಿ ಬೆಂಗಳೂರಿಗೆ ತಲುಪುತ್ತಿದ್ದ ಈ ರೈಲು, ಇನ್ನುಮುಂದೆ ಬೆಳಗ್ಗೆ ಬೇಗ ಹೊರಟು ಸಂಜೆಯ ವೇಳೆಗೆ ಬೆಂಗಳೂರು ತಲುಪಲಿದೆ. ಇದರಿಂದ ಪ್ರಯಾಣಿಕರು ರಾತ್ರಿಯೊಳಗೆ ತಮ್ಮ ಮನೆಗೆ ಸೇರಬಹುದು.















