ಮೂಡುಬಿದಿರೆ: ನಮ್ಮ ದೇಶದಲ್ಲಿ ಶೇ 46ರಷ್ಟಿರುವ ಯುವಸಮೂಹ ರಾಷ್ಟ್ರವನ್ನು ಮುನ್ನಡೆಸುವ ಶಕ್ತಿಯಾಗಿದೆ. ಪ್ರಾಮಾಣಿಕ ಜ್ಞಾನಾರ್ಜನೆ, ತಾರ್ಕಿಕ ಚಿಂತನೆಯಿಂದ ಸಮಸ್ಯೆಯನ್ನು ಪರಿಹರಿಸುವ ಅರಿವನ್ನು ತಮ್ಮದಾಗಿಸಿಕೊಂಡು ಜ್ಞಾನದಿಂದ ಜಗತ್ತನ್ನು ಆಳುವ ಶಕ್ತಿಯನ್ನು ವಿದ್ಯಾರ್ಥಿಗಳು ತಮ್ಮದಾಗಿಕೊಳ್ಳಬೇಕು. ಯುವ ಶಕ್ತಿಯ ಭವಿಷ್ಯದಲ್ಲಿ ದೇಶದ ಭವಿಷ್ಯ ಅಡಗಿದ್ದು ನಮ್ಮ ಹಣೆಬರಹವನ್ನು ನಾವೇ ಬರೆಯುತ್ತೇವೆ ಎನ್ನುವ ಸಂಕಲ್ಪ ವಿದ್ಯಾರ್ಥಿಗಳದ್ದಾಗಬೇಕು ಆಗ ಯಶಸ್ಸು ಹುಡುಕೊಂಡು ಬರುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ದ.ಕ ಜಿಲ್ಲಾಡಳಿತದ ವತಿಯಿಂದ ವಿದ್ಯಾಗಿರಿಯ ನುಡಿಸಿರಿ ಸಭಾಂಗಣದಲ್ಲಿ ಬುಧವಾರ ಸಂಜೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ರೈತ ಕುಟುಂಬದ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ವಿದ್ಯಾರ್ಥಿ ವೇತನ ಯೋಜನೆಯಡಿ ದ.ಕ ಜಿಲ್ಲೆಯ ಫಲಾನುಭವಿ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ಆಯ್ದ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿ ಬಳಿಕ ವಿದ್ಯಾರ್ಥಿ ಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.
ದೇಶದ 130 ಕೋಟಿ ಜನರಿಗೆ 20 ಕೋಟಿ ರೈತರು ಅನ್ನ ದಾತ ಜೀವನ ನೀಡುತ್ತಿದ್ದಾರೆ. ಹಾಗಾಗಿ ರೈತರನ್ನು ಗೌರವಿಸಿ. ಅವರ ಸಂಕಷ್ಟಗಳಿಗೆ ಸ್ಪಂದಿಸಿ ರೈತರನ್ನು ಸ್ವಾವಲಂಬಿಗಳನ್ನಾಗಿಸಲು ನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಾಲ್ಕು ಗಂಟೆಯೊಳಗೆ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಗೆ ಚಾಲನೆ ನೀಡಿದ್ದೇನೆ. ವಿಶೇಷವಾಗಿ 4 ಲಕ್ಷ ಮಹಿಳೆಯರನ್ನೂ ಉದ್ಯೋಗ ನೀಡಿ ಸ್ವಾವಲಂಬಿಗಳನ್ನಾಗಿಸುವ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ ಎಂದವರು ಹೇಳಿದರು.
ನವಕರ್ನಾಟಕಕ್ಕೆ ಸಿಎಂ ಶಪಥ: ರೈತರ ಉಜ್ವಲ ಭವಿಷ್ಯಕ್ಕಾಗಿ ಆರಂಭಿಸಿದ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಇಷ್ಟೊಂದು ದೊಡ್ಡ ವಿದ್ಯಾರ್ಥಿ ಸಮೂಹವನ್ನು ಮೊದಲ ಬಾರಿಗೆ ಉದ್ದೇಶಿಸಿ ಮಾತನಾಡುವ ಅವಕಾಶ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ದೊರೆತಿದೆ. ವಿದ್ಯಾರ್ಥಿಗಳು, ಯುವ ಸಮೂಹ ಮತ್ತು ರೈತರ ಶಕ್ತಿಯನ್ನು ಸದ್ಬಳಕೆ ಮಾಡಿಕೊಂಡು ನಾಡನ್ನು ಇನ್ನಷ್ಟು ಸದೃಢವಾಗಿ ಕಟ್ಟುವ, ಯುವಕರ ಭವಿಷ್ಯವನ್ನು ಉಜ್ವಲಗೊಳಿಸಿ ನವ ಕನರ್ಾಟಕದ ಮೂಲಕ ನವಭಾರತದ ನಿರ್ಮಾಣಕ್ಕೆ ಕೊಡುಗೆ ಸಲ್ಲಿಸುವ ಆಸೆಯಿದೆ. ಇದಕ್ಕಾಗಿ ರಾಷ್ಟ್ರದಲ್ಲಿ ಕರ್ನಾಟಕವನ್ನು ನಂಬರ್ ವನ್ ರಾಜ್ಯವನ್ನಾಗಿಸುವ ಶಪಥ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಏರು ಧ್ವನಿಯಲ್ಲಿ ಘೋಷಿಸಿದರು.
ಇದೇ ಸಂದರ್ಭದಲ್ಲಿ ಮಂಗಳೂರು ಊರ್ವಾದಲ್ಲಿ ನಿರ್ಮಾಣವಾದ 33/11 ಕೆ.ವಿ. ಗ್ಯಾಸ್ ಇನ್ಸುಲೇಟರ್ ಉಪಕೇಂದ್ರದ ಉದ್ಘಾಟನೆಯನ್ನು ಮುಖ್ಯಮಂತ್ರಿಯವರು ವೇದಿಕೆಯಲ್ಲಿ ನಾಮಫಲಕ ಅನಾವರಣಗೊಳಿಸಿ ನೆರವೇರಿಸಿದರು. ರಾಜ್ಯ ಇಂಧನ, ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನೀಲ್ ಕುಮಾರ್ ಮಾತನಾಡಿ ಮುಖ್ಯಮಂತ್ರಿಯವರ ಕನಸಿನ ಕಲ್ಪನೆಯ
ರೈತ ವಿದ್ಯಾನಿಧಿ ಯೋಜನೆಯಲ್ಲಿ ಫಲಾನುಭವಿಗಳ ಪೈಕಿ ರಾಜ್ಯದಲ್ಲೇ ಮೊದಲಬಾರಿಗೆ ವಿದ್ಯಾಥರ್ಿಗಳೊಂದಿಗೆ ಸಿಎಂ ನಡೆಸುತ್ತಿರುವ ಈ ಸಂವಾದ ಕಾರ್ಯಕ್ರಮದಲ್ಲಿ ದ.ಕ ಜಿಲ್ಲೆಯಲ್ಲಿ ನಡೆದಿರುವುದು ವಿಶೇಷತೆ. 22 ಸಾವಿರ ಮಂದಿ ಫಲಾನುಭವಿಗಳ ಪೈಕಿ ಜಿಲ್ಲೆಯ ವಿವಿಧ ಹಂತದ ಶಿಕ್ಷಣ ಸಂಸ್ಥೆಗಳ ಹತ್ತುಸಾವಿರಕ್ಕೂ ಅಧಿಕ ವಿದ್ಯಾರ್ಥಿ ಗಳು ಈ ಸಮ್ಮೇಳನದಲ್ಲಿ ಪಾಲ್ಗೊಂಡು ಯಶಸ್ಸಿಗೆ ಕಾರಣರಾಗಿದ್ದಾರೆ ಎಂದರು. ಕ್ಷೇತ್ರ ಶಾಸಕ ಉಮಾನಾಥ ಎ.ಕೋಟ್ಯಾನ್ ಅಧ್ಯಕ್ಷತೆವಹಿಸಿದ್ದರು.
ರಾಜ್ಯ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಕಂದಾಯ ಸಚಿವ ಆರ್.ಅಶೋಕ್, ಬಂದರು ಮೀನುಗಾರಿಕೆ ಸಚಿವ ಆಂಗಾರ ಎಸ್, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಕಟೀಲು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರುಗಳಾದ ರಾಜೇಶ್ ನಾಯ್ಕ್ ಉಳೆಪಾಡಿ, ಡಿ.ವೇದವ್ಯಾಸ ಕಾಮತ್, ವಿ.ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಜಿಲ್ಲಾ ಪೋಲೀಸ್ ಆಯುಕ್ತ ಎನ್. ಶಶಿಕುಮಾರ್, ಜಿಲ್ಲಾ ಕೆ.ಎಂ.ಎಫ್ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ಮೈಸೂರು ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿ. ಅಧ್ಯಕ್ಷ ಸಂತೋಷ ರೈ ಬೋಳಿಯಾರ್, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ಕರಾವಳಿ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಮೂಡುಬಿದಿರೆ ಪುರಸಭಾಧ್ಯಕ್ಷ ಪ್ರಸಾದ್ ಕುಮಾರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್, ಪುತ್ತಿಗೆ ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಅತಿಥೇಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ, ಮತ್ತಿತರರು ಉಪಸ್ಥಿತರಿದ್ದರು.
ದ.ಕ. ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಸ್ವಾಗತಿಸಿ ವಿಶ್ರಾಂತ ಪತ್ರಕರ್ತ ಮನೋಹರ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ವರದಿ :ಗಣೇಶ್ ಕಾಮತ್ ಮೂಡಬಿದಿರೆ.













