ಬಂಟ್ವಾಳ: ಭಾರೀ ಮಳೆ ಹಲವೆಡೆ ಅಪಾರ ಹಾನಿ ಚರಂಡಿ ಇಲ್ಲದೆ ರಸ್ತೆಯಲ್ಲೇ ಹರಿದ ಕೆಸರು ನೀರು.

Coastal Bulletin
ಬಂಟ್ವಾಳ: ಭಾರೀ ಮಳೆ ಹಲವೆಡೆ ಅಪಾರ ಹಾನಿ ಚರಂಡಿ ಇಲ್ಲದೆ ರಸ್ತೆಯಲ್ಲೇ ಹರಿದ ಕೆಸರು ನೀರು.

ಬಂಟ್ವಾಳ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಸಹಿತ ಮಳೆಗೆ ತಾಲ್ಲೂಕಿನ ಹಲವೆಡೆ ಮಣ್ಣು ಸಡಿಲಗೊಂಡು ಭೂ ಕುಸಿತ ಮತ್ತು ಮರ ಉರುಳಿ ಬಿದ್ದಿದೆ. ಮಾತ್ರವಲ್ಲದೆ ಹಲವು ಮನೆ ಮತ್ತು ಕೃಷಿ ಚಟುವಟಿಕೆಗೂ ಹಾನಿ ಉಂಟಾಗಿದೆ.

ಪುರಸಭಾ ವ್ಯಾಪ್ತಿಯ ಕಾಮಾಜೆ ಎಂಬಲ್ಲಿ ತಡೆಗೋಡೆ ಕುಸಿದು ಬಿದ್ದಿದೆ. ಇಲ್ಲಿನ ನಿವಾಸಿ ಸರೋಜಿನಿ ಕುಲಾಲ್ ಇವರ ಮನೆಗೆ ಹಾನಿಯಾಗಿದ್ದು, ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿದೆ.

ಮಿತ್ತಕಟ್ಟೆ ನಿವಾಸಿ ಚೋಮ ಮೂಲ್ಯರ ಮನೆ ಹಿಂಬದಿ ಗುಡ್ಡ ಕುಸಿದು ಬಿದ್ದು ಮನೆ ಶೀಟು ಹಾನಿಯಾಗಿದ್ದು, ಸಜಿಪಮೂಡ ಕಂಚಿಲ ನಿವಾಸಿ ಶಮೀಮ ಎಂಬವರ ಮನೆ ಗೋಡೆ ಕುಸಿದು ಹಾನಿಯಾಗಿದೆ. ಗೋಳ್ತಮಜಲು ಗ್ರಾಮದ ವಸಂತ ಎಂಬವರ ಮನೆ ಬಳಿ ತಡೆಗೋಡೆ ಕುಸಿದು ಹಾನಿಯಾಗಿದ್ದು, ನರಿಕೊಂಬು ಗ್ರಾಮದ ಊಜೊಟ್ಟು ಮತ್ತು ಸಾಲೆತ್ತೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ಬಿದ್ದಿದೆ. 

ಮಂಚಿ ಗ್ರಾಮದ ಪತ್ತುಮುಡಿ ರಹೀನಾ, ಮಹಮ್ಮದ್, ಅವ್ವಮ್ಮ, ವಿಠಲ ಪ್ರಭು ಎಂಬವರ ಮನೆ ಹಿಂಬದಿ ಗೋಡೆ ಕುಸಿದು ಹಾನಿಯಾಗಿದ್ದು, ಅಯಿಶಮ್ಮ ಇವರ ಮನೆ ಬಳಿ ತಡೆಗೋಡೆ ಕುಸಿದಿದೆ. 

ಇಲ್ಲಿನ ನೀರಬೈಲು ನಿವಾಸಿ ಹಮೀದ್ ಇವರ ಅಡಿಕೆ ತೋಟಕ್ಕೆ ನೀರು ನುಗ್ಗಿ ಕೃಷಿಗೆ ಹಾನಿಯಾಗಿದ್ದು, ಮಂಚಿ ಗ್ರಾಮದ ಪುರುಷೋತ್ತಮ ಎಂಬವರ ಮನೆಯ ಅವರಣ ಗೋಡೆ ಕುಸಿದು ಬಿದ್ದಿದೆ. ಮಾಣಿ ಗ್ರಾಮದ ಉಷಾ ಶೆಟ್ಟಿ ಇವರ ಮನೆಗೆ ನೀರು ನುಗ್ಗಿದೆ. ಬಂಟ್ವಾಳ -ಮೂಡುಬಿದ್ರೆ ರಸ್ತೆ ನಡುವಿನ ಮಂಡಾಡಿ ತಿರುವು ರಸ್ತೆಯಲ್ಲಿ ಮರ ಉರುಳಿ ಬಿದ್ದು ವಿದ್ಯುತ್ ಕಂಬ ಮುರಿದಿದ್ದು, ಮೋರಿ ಹಾನಿಗೀಡಾಗಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಸಹಿತ ಬಹುತೇಕ ರಸ್ತೆ ಬದಿ ಸೂಕ್ತ ಚರಂಡಿ ಇಲ್ಲದೆ ರಸ್ತೆಯಲ್ಲೇ ಕೆಸರು ನೀರು ತುಂಬಿಕೊಂಡ ಪರಿಣಾಮ ವಿದ್ಯಾರ್ಥಿಗಳು ತೊಂದರೆಗೆ ಈಡಾದರು

Leave a Comment