Coastal Bulletin

ಮಂಗಳೂರು: ದೇಶ ಸ್ವಾತಂತ್ರ್ಯ ಪಡೆದ ಮೇಲೂ ನಾಗರಿಕ ಸ್ವಾತಂತ್ರ್ಯಕ್ಕೆ ಬಹಳಷ್ಟು ಅಡ್ಡಿ ಆತಂಕಗಳಿದ್ದ ಗೋವಾದಲ್ಲಿ ಮಿಲಿಟರಿ ದಬ್ಬಾಳಿಕೆಯ ನಡೆವೆಯೂ ಪೂನಾದ ಸಿಂಧೂ ದೇಶಪಾಂಡೆಯಂತವರು ಹೋರಾಟಕ್ಕೆ ಸ್ಫೂರ್ತಿ ತುಂಬಿ ರಾಷ್ಟ್ರೀಯತೆಯ ಭಾವನೆಗೆ ಮಾದರಿಯಾದರು.

ಇನ್ನೊಂದೆಡೆ ಪೋರ್ಚ್ ಗೀಸರು ಶಾಂತಿ ಸಂಧಾನದಂತಹ ಮಹತ್ವದ ಪ್ರಕ್ರಿಯೆಯಲ್ಲಿ ಕೃಷ್ಣ ಶೆಣೈ, ಅಪ್ಪು ನಾಯಕ್, ವಿಠಲ ಶೆಣೈ, ಕಾಮತ್ ವಾಗೋ ಹೀಗೆ ಗೌಡ ಸಾರಸ್ವತ ಸಮುದಾಯದ ಪ್ರಮುಖರನ್ನು ಬಳಸಿಕೊಂಡು ಬೆಳೆದರೂ ಧಾರ್ಮಿಕ ದಬ್ಬಾಳಿಕೆಯಲ್ಲಿ ಅವರ ಸಮುದಾಯಕ್ಕೂ ವಿನಾಯಿತಿ ನೀಡದೆ ಸಾಕಷ್ಟು ಹಿಂಸೆ ನೀಡಿದರು ಎಂದು ಗೋವಾದ ಪುರಾತತ್ವ ಸಚಿವಾಲಯದ ಪತ್ರಾಗಾರ ಪ್ರಕಟಣಾ ವಿಭಾಗದ ಬಾಲಾಜಿ ಶೆಣೈ ಹೇಳಿದರು. ಅವರು ಶನಿವಾರ ಸಂಜೆ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಪತ್ರಾಗಾರ ದಾಖಲೆಗಳ ಸಂಪನ್ಮೂಲಗಳ ಮೂಲಕ ಗೋವಾದ ಇತಿಹಾಸ ಕುರಿತು ವಿಶೇಷ ಉಪನ್ಯಾಸ ನೀಡಿದರು. 

ಪೋರ್ಚ್ ಗೀಸ್, ಮೋಡಿ, ಗೋಯ್ಖಂಡಿ, ಮತ್ತು ಆಂಗ್ಲ ಭಾಷೆಯಲ್ಲಿರುವ ಅಪಾರ ಹಸ್ತಪ್ರತಿಗಳು, ಹಲವು ವಿಧಗಳ ದಾಖಲೆಗಳು ಗೋವಾದ ಇತಿಹಾಸವನ್ನು ವ್ಯವಸ್ಥಿತ ರೂಪದಲ್ಲಿ ನಮಗೆ ಕಟ್ಟಿಕೊಡುತ್ತವೆ. ಈ ಮಹತ್ವದ ದಾಖಲೆಗಳ ಮೂಲಕ ಭಾರತದ ಇತಿಹಾಸ, ವಿದೇಶೀ

ವ್ಯವಹಾರ, ಆಂತರಿಕ ಶ್ರೀಮಂತಿಕೆ, ಸಂಸ್ಕೃತಿಯ ಮೇಲೆ ನಡೆದಿರುವ ವಸಾಹತು ಶಾಹೀ ದಬ್ಬಾಳಿಕೆಯ ವಿವಿಧ ಮಜಲುಗಳು ನಮ್ಮೆದುರು ತೆರೆದುಕೊಳ್ಳುತ್ತವೆ ಎಂದವರು ಹೇಳಿದರು.  

ಗೋವಾದಲ್ಲಿ ಪೋರ್ಚ್ ಗೀಸ್ ಭಾಷೆ ಮತ್ತು ಪತ್ರಾಗಾರದ ಹತ್ತಿರವಿರುವ ಮಾಂಡೋವಿ ನದಿ ಹಿನ್ನೆಲೆಯಲ್ಲಿ ತೇವಾಂಶದ ಕಾರಣದಿಂದ ಈ ಅಮೂಲ್ಯ ದಾಖಲೆಗಳನ್ನು ಸಂರಕ್ಷಿಸುವುದೇ ದೊಡ್ಡ ಸವಾಲಾಗಿದ್ದು ಅಮೂಲ್ಯ ದಾಖಲೆಗಳ ಡಿಜಿಟಲೀಕರಣ, ಭಾಷಾಂತರ ಮೂಲಕ ಇತಿಹಾಸವನ್ನು ಶ್ರೀಮಂತಗೊಳಿಸುವ ಪ್ರಕ್ರಿಯೆ ನಿರಂತರವಾಗಿ ನಡೆದಿದೆ ಎಂದವರು ವಿವರಿಸಿದರು. 

ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಸಿ.ಎ ನಂದಗೋಪಾಲ ಶೆಣೈ ಅವರು ಉಪನ್ಯಾಸ ನೀಡಿದ ಬಾಲಾಜಿ ಶೆಣೈ ಅವರನ್ನು ಗೌರವಿಸಿದರು. ಕಾರ್ಯದರ್ಶಿ ಗಿರಿಧರ ಕಾಮತ್, ಕೋಶಾಧಿಕಾರಿ ಬಿ.ಆರ್. ಭಟ್,ಟ್ರಸ್ಟಿ ಡಾ. ಕೆ. ಮೋಹನ ಪೈ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಬಂಟ್ವಾಳ್ಕರ್ ಮತ್ತಿತತರು ಉಪಸ್ಥಿತರಿದ್ದರು. ವಿಶ್ವ ಕೊಂಕಣಿ ಕೇಂದ್ರದ ವಿದ್ಯಾರ್ಥಿ ನಿರಂಜನ ಕಾಮತ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Comment