Coastal Bulletin

ಉಡುಪಿ: ಯುವತಿಗೆ ಚೂರಿಯಿಂದ ಇರಿದು, ಬಳಿಕ ತಾನು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆ ಬಳಿ ನಡೆದಿದೆ.

ಅಂಬಾಗಿಲು ಸಮೀಪದ ಕಕ್ಕುಂಜೆ ನಿವಾಸಿ ವಿಠಲ ಭಂಡಾರಿ ಹಾಗೂ ಸುಶೀಲಾ ದಂಪತಿಯ ಪುತ್ರಿ ಸೌಮ್ಯಶ್ರೀ(26) ಕೊಲೆಯಾಗಿದ್ದು, ಕೃತ್ಯ ಎಸಗಿರುವ ಆರೋಪಿ ಅಲೆವೂರು ರಾಂಪುರ ನಿವಾಸಿ ಸಂದೇಶ್ ಕುಲಾಲ್(26) ಗಂಭೀರ ಸ್ಥಿತಿಯಲ್ಲಿ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸೌಮ್ಯಶ್ರೀ ಸಂತೆಕಟ್ಟೆಯ ರಾಷ್ಟ್ರೀಕೃತ ಬ್ಯಾಂಕಿನ ಆಧಾರ್ ಕಾರ್ಡ್ ಲಿಂಕ್ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಡೇಟಾ ಎಂಟ್ರಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಸಂಜೆ ಕೆಲಸ ಮುಗಿಸಿ ಬ್ಯಾಂಕಿನಿಂದ ತನ್ನ ಸ್ಕೂಟಿಯಲ್ಲಿ ಮನೆಗೆ ವಾಪಾಸ್ಸು ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಸಂದೇಶ್, ಸಂತೆಕಟ್ಟೆ ಬಳಿ ತಡೆದು

ನಿಲ್ಲಿಸಿದ್ದನು.ಆಗ ಅವರಿಬ್ಬರ ಮಧ್ಯೆ ಜಗಳ  ನಡೆದು, ಈ ವೇಳೆ ಸಂದೇಶ್ ಕುಲಾಲ್, ತಾನು ತಂದಿದ್ದ ಚೂರಿಯಿಂದ ಸೌಮ್ಯಶ್ರೀಗೆ ಇರಿದ ಎನ್ನಲಾಗಿದೆ. ನಂತರ ಅದೇ ಚಾಕುವಿನಿಂದ ಆತ ತನ್ನ ಕುತ್ತಿಗೆ ಕೊಯ್ದುಕೊಂಡಿದ್ದಾನೆ.

ಸಂದೇಶ್ ಕುಲಾಲ್ ಉಡುಪಿಯ ಐಡಿಯಲ್ ಮೆಡಿಕಲ್ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಇವರಿಬ್ಬರು ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.ಕೆಲ ದಿನಗಳ ಹಿಂದೆ ಸೌಮ್ಯಶ್ರೀಗೆ ಬೇರೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥ ಆಗಿತ್ತೆಂದು ತಿಳಿದುಬಂದಿದೆ. ಇದರಿಂದ ಕೋಪಗೊಂಡ ಸಂದೇಶ ಕುಲಾಲ್ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ  ವ್ಯಕ್ತಪಡಿಸಿದ್ದಾರೆ.

Leave a Comment