ಬಂಟ್ವಾಳ: ಹಿರಿಯ ಪತ್ರಕರ್ತ, ಸಂಘಟಕ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಡಿ.ಎಂ. ಕುಲಾಲ್ ಎಂದೇ ಪರಿಚಿತರಾಗಿದ್ದ, ದೈಪಲ ಮಾಧವ ಕುಲಾಲ್ (54) ಅವರು ಇಂದು ಬಂಟ್ವಾಳ ತಾಲೂಕಿನ ದೈಪಲದಲ್ಲಿರುವ ತಮ್ಮ ಮನೆಯಲ್ಲಿ ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು.
ಮುಂಗಾರು,ನೇತ್ರಾವತಿ ವಾರ್ತೆ ಇನ್ನಿತರ ಪತ್ರಿಕೆಗಳಲ್ಲಿ ವರದಿಗಾರರಾಗಿ ಕೆಲಸ ಮಾಡಿದ ಡಿ.ಎಂ. ಕುಲಾಲ್ ಮುಂಬಯಿ ಕುಲಾಲ ಸಂಘದ ಮಾಸಿಕ "ಅಮೂಲ್ಯ"ದ ಸಂಪಾದಕೀಯ ಮಂಡಳಿಯಲ್ಲೂ ಇದ್ದರು. ಬೇರೆ ಉದ್ಯೋಗಕ್ಕೆ ಸೇರಿದ ಮೇಲೂ ಲೇಖನಗಳನ್ನು ಬರೆಯುತ್ತಿದ್ದರು.
ಮೊದಲಿಗೆ ಸಿಪಿಐ ಮತ್ತು ಹಿಂದುಳಿದ ವರ್ಗಗಳ
ರಾಜಕೀಯದಲ್ಲಿ ಗುರುತಿಸಿಕೊಂಡಿದ್ದ ಅವರು, ನಂತರ ಮೂಲ್ಯರ ಯಾನೆ ಕುಲಾಲರ ಸಂಘಟನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡು ಹಲವಾರು ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಇತ್ತೀಚೆಗೆ ಅವರಿಗೆ ತುಳು ಅಕಾಡಮಿಯ "ಚಾವಡಿ" ಪ್ರಶಸ್ತಿ ನೀಡಿ ಮನೆಯಲ್ಲಿಯೇ ಸನ್ಮಾನಿಸಲಾಗಿತ್ತು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.














