ಕಾಸರಗೋಡು:ಎಂಡೋಸಲ್ಫಾನ್ ಬಾಧಿತರು ಬಾಳೆಎಲೆಯಲ್ಲಿ ಮಣ್ಣು ತಿನ್ನುವ ಮೂಲಕ ವಿನೂತನ ರೀತಿಯ ಪ್ರತಿಭಟನೆ ನಡೆಸಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಕಾರ್ಯ ಕಾಸರಗೋಡು ತಾಲೂಕಿನ ಎಣ್ಮಕಜೆ ಪಂಚಾಯತ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕೋವಿಡ್ 19 ಮಹಾಮಾರಿಯ ನಡುವೆಯೂ ಎಂಡೋಸಲ್ಫಾನ್ ಪೀಡಿತರಿಗೆ ಪಿಂಚಣಿ ಮೊತ್ತ ನೀಡದಿರುವ ಕೇರಳ ಸರಕಾರದ ಕ್ರಮವನ್ನು ಖಂಡಿಸಿ ಎಂಡೋಸಲ್ಫಾನ್ ಬಾಧಿತ ಒಕ್ಕೂಟದ ವತಿಯಿಂದ ನಮಗೂ ಓಣಂ ಆಚರಿಸಬೇಕು ಪಿಂಚಣಿ ನೀಡಿ ಎಂಬ ಧ್ಯೇಯವಾಕ್ಯದೊಂದಿಗೆ ಎಂಡೋ ಸಂತ್ರಸ್ತರು ಮಂಗಳವಾರ ಈ ಉಪವಾಸ ಸತ್ಯಾಗ್ರಹ ನಡೆಸಿದರು.
ಎಣ್ಮಕಜೆ ಗ್ರಾಮ ಪಂಚಾಯತ್ ಕಚೇರಿ ಪರಿಸರದಲ್ಲಿ ಜರಗಿದ ಪ್ರತಿಭಟನಾ ಧರಣಿಯನ್ನು ಪಂಚಾಯತ್ ಅಧ್ಯಕ್ಷ
ಸೋಮಶೇಖರ್ ಜೆ.ಎಸ್. ಉದ್ಘಾಟಿದರು. ಕೃಷ್ಣ ಕಜಂಪಾಡಿ ಅಧ್ಯಕ್ಷತೆ ವಹಿಸಿದ್ದರು.
ಪಂಚಾಯತ್ ಅಭಿವೃದ್ಧಿ ಸ್ಥಾಯೀ ಸಮಿತಿಯ ಅಧ್ಯಕ್ಷ ಬಿ.ಎಸ್.ಗಾಂಭೀರ್, ಪಂಚಾಯತ್ ಸದಸ್ಯರಾದ ನರಸಿಂಹ ಪೂಜಾರಿ, ರಮ್ಲ ಇಬ್ರಾಹಿಂ ಮಾತನಾಡಿದರು. ಶಿವಕುಮಾರ್ ಸ್ವಾಗತಿಸಿ, ಸೂರ್ಯನಾರಾಯಣ ವಂದಿಸಿದರು. ಈ ಸಂದರ್ಭದಲ್ಲಿ ಎಂಡೋ ಪೀಡಿತರು ಮತ್ತು ಅವರ ಮನೆಯವರು ಬಾಳೆಎಲೆಯಲ್ಲಿ ಮಣ್ಣು ತಿನ್ನುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.














