ಪ್ರೇಮಿಗಳ ದಿನದ ಪ್ರಯುಕ್ತ ಸಾನಿಯಾ ಅಯ್ಯರ್ ಮತ್ತು ಸಮರ್ಜಿತ್ ಜೋಡಿ ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ಈ ವಿಭಿನ್ನವಾದ ಫೋಟೋಶೂಟ್ ಗೆ ಬಾಲಿವುಡ್ ಸೆಲೆಬ್ರಿಟಿಗಳ ಮೇಕಪ್ ಆರ್ಟಿಸ್ಟ್ ಗೌರಿ ಕಪೂರ್ ಅವರಿಂದ ಮೇಕಪ್ ಮಾಡಿಸಿದ್ದು, ಖ್ಯಾತ ಛಾಯಾಗ್ರಾಹಕ ಕೆನಡಾದ ರೋಹಿತ್ ಅವರಿಂದ ಫೋಟೋಗಳನ್ನು ತೆಗೆಸಲಾಗಿದೆ. ಈ ಫೋಟೋಶೂಟ್ ನ ವೀಡಿಯೋವನ್ನು ಸಾನ್ಯಾ ಅಯ್ಯರ್ ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಗೌರಿ ಎಂಬ ಹೆಸರು ಸಾನ್ಯಾಗೆ ಲಕ್ ತಂದುಕೊಡಬಹುದು ಎಂದು ಅಭಿಮಾನಿಗಳು ಊಹಿಸಿದ್ದಾರೆ. ಯಾಕೆಂದರೆ ಸದ್ಯ ಸಾನ್ಯಾ ಅವರು ಪುಟ್ಟ ಗೌರಿ ಧಾರಾವಾಹಿ ಮೂಲಕ ಚಿರಪರಿಚಿತರಾಗಿದ್ದರು. ಇದೀಗ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಗೌರಿ ಹೆಸರಿನ ಚಿತ್ರದಲ್ಲಿ ನಟಿಸುತ್ತಿದ್ದು, ಇದು ಕೂಡ ಸಾನ್ಯಾ ಅವರಿಗೆ ಒಳ್ಳೆಯ ಸಕ್ಸಸ್ ತಂದು ಕೊಡಬಹುದು ಎಂದು ಅನೇಕರು ಗೆಸ್ ಮಾಡಿದ್ದಾರೆ. ಸ್ಟೈಲಿಶ್ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರ ಬಹುನಿರೀಕ್ಷಿತ ಸಿನಿಮಾ ಗೌರಿ ಚಿತ್ರದ ಡಬ್ಬಿಂಗ್ ಸದ್ಯಕ್ಕೆ ನಡೆಯುತ್ತಿದೆ. ಕೆಲವೇ ದಿನಗಳಲ್ಲಿ ಸಿನಿಮಾ ರಿಲೀಸ್ ಆಗುವ ಸೂಚನೆಯೂ ಕಾಣಿಸುತ್ತಿದೆ.
ಖ್ಯಾತ ಸಾಹಿತಿ ಪಿ ಲಂಕೇಶ್ ಅವರ ಮೊಮ್ಮಗ, ಲಂಕೇಶ್ ಕುಟುಂಬದ ಮೂರನೇ ತಲೆಮಾರು ಸಮರ್ಜಿತ್ ಲಂಕೇಶ್ ಗೌರಿ ಚಿತ್ರದ ನಾಯಕನಾಗಿದ್ದು, ಸಾನ್ಯಾಗೆ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.
ಸಾನ್ಯಾ ತಮ್ಮ ಬೋಲ್ಡ್ ಫೋಟೋ ಗಳಿಂದ ಟ್ರೋಲ್ ಆಗಿದ್ದೇ ಹೆಚ್ಚು. ಆದರೆ, ಇದ್ಯಾವುದಕ್ಕೂ ಸಾನ್ಯಾ ಅವರು ತಲೆ ಕೆಡಿಸಿಕೊಳ್ಳಲಿಲ್ಲ. ಬಿಗ್ ಬಾಸ್ ಮೂಲಕ ರೂಪೇಶ್ ಶೆಟ್ಟಿ ಜೊತೆಗೆ ಸಾನ್ಯಾ ಅವರ ಹೆಸರು ಸೇರಿಕೊಂಡಿತ್ತು. ಇಬ್ಬರೂ ಒಟ್ಟಿಗೆ ಸಿನಿಮಾ ಮಾಡಲಿ ಎಂದು ಕೂಡ ಅಭಿಮಾನಿಗಳು ಬಯಸಿದ್ದರು.ಆದರೆ ಇದೀಗ ಸಾನ್ಯಾ ಸಮರ್ಜಿತ್ ಜೊತೆ ಹೊಸ ಸಿನೇಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.









