ಮಂಗಳೂರು:ಮೊಬೈಲ್ ಫೋನ್ ಮೂಲಕ ಅಪ್ರಾಪ್ತ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಂಕನಾಡಿ ನಗರ ಠಾಣೆಯ ಸಿಬ್ಬಂದಿಯೊಬ್ಬನನ್ನು ಬಂಧಿಸಲಾಗಿದೆ.ಬಂಧಿತ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ವಿನೋದ್ ಎಂದು ಗುರುತಿಸಲಾಗಿದೆ.
ಕಳೆದ ಜನವರಿಯಲ್ಲಿ ಆಟೋ ರಿಕ್ಷಾ ಚಾಲಕನಿಂದ ಕಿರುಕುಳ ಆಗ್ತಿದೆ ಎಂದು ಅಪ್ರಾಪ್ತ ಬಾಲಕಿಯೊಬ್ಬಳು ತಾಯಿ ಜೊತೆಗೆ ಠಾಣೆಗೆ ದೂರು ನೀಡಲು ಬಂದಿದ್ದಳು. ದೂರು ಪಡೆದ ಕಂಕನಾಡಿ ಠಾಣೆಯ ಪೊಲೀಸ್ ಪೇದೆ ವಿನೋದ್,ಅಟೋ ಚಾಲಕನನ್ನು ಗದರಿಸುತ್ತೇನೆಂದು ಹೇಳಿ ಹುಡುಗಿಯ ನಂಬರ್ ಪಡೆದಿದ್ದ. ಆನಂತರ ಕಿರುಕುಳಕ್ಕೆ ಒಳಗಾದ ಹುಡುಗಿಯ ಜೊತೆ ತಾನೇ ಚಾಟ್ ಮಾಡಲು ಆರಂಭಿಸಿದ್ದ. ನ್ಯಾಯ ಕೇಳಿಕೊಂಡು ಬಂದ ಹುಡುಗಿಗೆ ತಾನೇ ಸೆಕ್ಸ್ ವಿಚಾರದಲ್ಲಿ ಚಾಟಿಂಗ್ ಮಾಡುತ್ತಾ
ವಿಕೃತ ಕಿರುಕುಳ ಕೊಡಲು ಆರಂಭಿಸಿದ್ದ.
ಹುಡುಗಿಯ ಮನೆಯವರು ಪೊಲೀಸ್ ಪೇದೆಯ ಕಿರುಕುಳ ತಾಳಲಾರದೆ ಚೈಲ್ಡ್ ಲೈನ್ ಸಂಸ್ಥೆಗೆ ವಿಷಯ ತಿಳಿಸಿದ್ದಾರೆ. ಮೊಬೈಲಿನಲ್ಲಿ ವಿಕೃತವಾಗಿದ್ದ ಚಾಟಿಂಗ್ ರೆಕಾರ್ಡನ್ನು ನೋಡಿದ ಅಲ್ಲಿನ ಸಿಬ್ಬಂದಿ ಮಂಗಳೂರಿನ ಪಾಂಡೇಶ್ವರದ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಕಂಕನಾಡಿ ನಗರ ಠಾಣೆಯ ಪೇದೆ ಬೆಂಗ್ರೆ ನಿವಾಸಿ ವಿನೋದ್ ನನ್ನು ಬಂಧಿಸಿದ್ದಾರೆ.ಅಪ್ರಾಪ್ತ ಹುಡುಗಿಗೆ ಕಿರುಕುಳ ನೀಡಿದ್ದ ಕಾರಣಕ್ಕೆ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.















