ಬೆಂಗಳೂರು : ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆ ಒಂದಾಗಿದ್ದರೂ ಕೂಡ ತುಳುನಾಡಿನ ರಾಜಕಾರಣಿಗಳ ಹಿತಾಸಕ್ತಿಯ ಕೊರತೆಯಿಂದಾಗಿಯೋ,ಸರಕಾರದ ನಿರ್ಲಕ್ಷ್ಯ ದಿಂದಾಗಿಯೋ,ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಹಾಗೂ 8 ನೇ ಪರಿಚ್ಛೇದಕ್ಕೆ ಸೇರದೇ ಉಳಿದಿದೆ ಇದರ ಪರಿಣಾಮವಾಗಿ ಮತ್ತೆ "Tweet Tulunad" ಅಭಿಯಾನವನ್ನು ನಡೆಸುವುದಾಗಿ ಜೈ ತುಳುನಾಡು ಸಂಘಟನೆ (ರಿ) ಇವರು ಕರೆ ನೀಡಿದ್ದಾರೆ .
ಪಂಚ ದ್ರಾವಿಡ ಭಾಷೆಗಳಲ್ಲಿ ತನ್ನದೇ ಆದ ಭಾಷಾ ಶ್ರೀಮಂತಿಕೆಯನ್ನು ಪಡೆದ ತುಳು ಭಾಷೆ ಸರಿಯಾದ ಮಾನ್ಯತೆ ಇಲ್ಲದೆ ಅನೇಕ ಅವಮಾನಗಳನ್ನು ಸಹಿಸುವಂತಾಗಿದೆ ಎಂಬುವುದು ತುಳುವರ ಧ್ವನಿಯಾಗಿದೆ.
ತುಳುವನ್ನು ಲಿಪಿ ಇದ್ದರೂ ಲಿಪಿ ಇಲ್ಲದ ಭಾಷೆ ಎನ್ನುವುದು, ಇನ್ನೊಂದು ಭಾಷೆಯ ಉಪಭಾಷೆ
ಎನ್ನುವುದು, ದೈವಾರಾಧನೆಯನ್ನು ತಮಾಷೆಯಾಗಿ ಬಿಂಬಿಸುವುದು ಇದೆಲ್ಲದಕ್ಕೂ ತುಳುವರು ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.
ತುಳು ಪ್ರದೇಶದ ಅತೀ ಹೆಚ್ಚು ಶಾಸಕರು, ರಾಜ್ಯ ಸರಕಾರ, ಕೇಂದ್ರ ಸರಕಾರ ಎಲ್ಲವೂ ಒಂದೇ ಪಕ್ಷದವರಾಗಿಯೂ ತುಳುವಿಗೆ ಇನ್ಯಾವಾಗ ರಾಜ್ಯ ಭಾಷೆಯ ಮಾನ್ಯತೆ ಎಂಬುವುದು ತುಳುವರ ಪ್ರಶ್ನೆಯಾಗಿದೆ.















