Coastal Bulletin

ಉಡುಪಿ: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ, ಮದ್ಯ ಖರೀದಿ ಸ್ಥಗಿತಗೊಂಡು ರಾಜ್ಯದಲ್ಲಿ ತುಂಬಾನೇ ಅವಾಂತರಗಳು ಆಗಿವೆ. ವಾಪಾಸು ಮದ್ಯ ಖರೀದಿ ಸ್ಥಗಿತಗೊಳಿಸುವ ಮಾಹಿತಿ ಕೇಳಿಬರುತ್ತಿದೆ. ಆದರೆ ಈ ಸಲ ಮಾಹಿತಿ ನೀಡಿರುವುದು ಮದ್ಯ ಖರೀದಿಗಾರರೇ ಹೊರತು ಸರ್ಕಾರ ಅಲ್ಲ.

ಇಷ್ಟಕ್ಕೂ ಮದ್ಯ ಖರೀದಿ ಸ್ಥಗಿತಗೊಳ್ಳುವುದು ಯಾಕೆ ಗೊತ್ತಾ? ಸರಕಾರ ಶುರುಮಾಡಿರುವ‌ ಈ- ಇಂಡೆಂಟ್ ವ್ಯವಸ್ಥೆಯಿಂದ ಮತ್ತೆ ಖರೀದಿಗಾರರು ನಷ್ಟ ಅನುಭವಿಸುತ್ತಿದ್ದಾರೆ.

ಈ ಮೊದಲು ಖರೀದಿಗಾರರು ಮದ್ಯ ಸರಬರಾಜು ಪಡೆಯುವುದು ಸುಲಭವಾಗಿತ್ತು. ನೇರವಾಗಿ ಹೋಗಿ ಮದ್ಯ ಖರೀದಿಸಿ ಗ್ರಾಹಕರಿಗೆ ನೀಡಬಹುದಿತ್ತು. ಆದರೆ ಈಗ ಆನ್ಲೈನ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಏಪ್ರಿಲ್ 4ರಿಂದ ಜಾರಿಯಾಗಿರುವ ವಿನೂತನ ವ್ಯವಸ್ಥೆಗೆ ಮದ್ಯ ಖರೀದಿಗಾರರು ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. 2011ನೇ ಇಸವಿಯಿಂದ ಮದ್ಯ ಖರೀದಿಗೆ ಬೇರೆಯದೇ ತಂತ್ರಜ್ಞಾನ ಇತ್ತು. ಹಳೆಯ ವ್ಯವಸ್ಥೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಏಪ್ರಿಲ್ ನಾಲ್ಕರಿಂದ ಹೊಸ ಪದ್ಧತಿ ಜಾರಿಯಾಗಿದೆ.

ಪದ್ಧತಿಯ ಅನುಸಾರ ವೆಬ್‌ಸೈಟಿಗೆ ಹೋಗಿ ಬೇಕಾದ ಮದ್ಯಗಳ ವಿವರವನ್ನು ಅಪ್ಲೋಡ್ ಮಾಡಬೇಕು. ಅದರಲ್ಲೂ ರಾತ್ರಿ 9 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೆ ಮಾತ್ರ ಅಪ್ಲೋಡ್ ಮಾಡಲು ಅವಕಾಶ. ಇದೇ ಸಂದರ್ಭದಲ್ಲಿ ಸರ್ವರ್ ಕೈಕೊಟ್ಟರೆ ಕೇಳುವುದೇ ಬೇಡ. ಗ್ರಾಹಕರ ಬೇಡಿಕೆಯ ಮದ್ಯಗಳನ್ನು ಪಡೆಯಲು ಸನ್ನದುದಾರರಿಗೆ ಸಾಧ್ಯವಾಗುತ್ತಿಲ್ಲ. ನೂತನ ವ್ಯವಸ್ಥೆಯಲ್ಲಿ ಅನೇಕ ಲೋಪದೋಷಗಳಿದ್ದು, ಈ ಬಗ್ಗೆ ಇಲಾಖೆಯ ಮುಂದೆ ಕೇಳಿಕೊಂಡರೂ ಸಮಂಜಸ ಉತ್ತರ ಸಿಕ್ಕಿಲ್ಲ ಎಂದು ಮದ್ಯ ಖರೀದಿಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋವಿಂದರಾಜ ಹೆಗ್ಡೆ ಆರೋಪಿಸಿದ್ದಾರೆ.

2020 -21 ನೇ ಇಸವಿಯಲ್ಲಿ ಕೊರೊನಾದಿಂದ

ನಮಗೆ ನಷ್ಟವಾಗಿದೆ. ಈ ವರ್ಷ ಕೆಎಸ್‌ಬಿಸಿಎಲ್ ಕೊರೋನಾಕ್ಕಿಂತಲೂ ದೊಡ್ಡ ಹೊಡೆತ ಕೊಟ್ಟಿದೆ.  ಶೇಕಡ 80ರಷ್ಟು ಸಣ್ಣ ಸನ್ನದುದಾರರು ತೊಂದರೆ ಅನುಭವಿಸುತ್ತಿದ್ದು ಮೇ 6ನೇ ತಾರೀಖಿನಿಂದ ಹಂತಹಂತವಾಗಿ ಹೋರಾಟ ಆರಂಭಿಸಲಾಗುತ್ತಿದೆ.

ಮೇ 6ರಂದು ಗುಲ್ಬರ್ಗ ವಿಭಾಗದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರು, ಯಾದಗಿರಿ, ಮೇ 10ರಂದು, ಹೊಸಪೇಟೆ ವಿಭಾಗದ ಜಿಲ್ಲೆಗಳಾದ ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಗದಗ, ಕೊಪ್ಪಳ ಮತ್ತು ಬೆಳಗಾವಿ ವಿಭಾಗದ ಜಿಲ್ಲೆಗಳಾದ ಬಾಗಲಕೋಟೆ, ಬೆಳಗಾವಿ ,ಬಿಜಾಪುರ, ಧಾರವಾಡ, ಹಾವೇರಿ, ಮೇ 12ರಂದು, ಮೈಸೂರು ವಿಭಾಗದ ಜಿಲ್ಲೆಗಳಾದ ಮೈಸೂರು ,ಚಿಕ್ಕಮಗಳೂರು, ಹಾಸನ ,ಮಂಡ್ಯ ,ಮತ್ತು ಮಂಗಳೂರು ವಿಭಾಗದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಶಿವಮೊಗ್ಗ ,ಉಡುಪಿ, ಉತ್ತರಕನ್ನಡ, ಮೇ 17ರಂದು- ಬೆಂಗಳೂರು ವಿಭಾಗದ ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ರಾಮನಗರ, ತುಮಕೂರು, ಮೇ 19ರಂದು ಬೆಂಗಳೂರು ನಗರ ವಿಭಾಗದ ಕೆಎಸ್‌ಬಿಸಿಎಲ್ ಡಿಪೋಗಳಲ್ಲ ಮದ್ಯ ಖರೀದಿ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.

ಮೇ 19 ರವರೆಗೂ ವಿವಿಧ ಜಿಲ್ಲೆಗಳಲ್ಲಿ ವಿಭಾಗವಾರು ಮದ್ಯ ಖರೀದಿ ಸ್ಥಗಿತ ಮಾಡಲಾಗುತ್ತಿದೆ. ಇಷ್ಟರ ಮೇಲೂ ಸರಕಾರ ನಮ್ಮ ಸಮಸ್ಯೆಯನ್ನು ಕಿವಿಗೆ ಹಾಕಿಕೊಳ್ಳಲಿಲ್ಲವಾದರೆ ಮೇ 19 ನೇ ತಾರೀಖಿನ ನಂತರ, ರಾಜ್ಯಾದ್ಯಂತ ಮದ್ಯ ಖರೀದಿ ಸ್ಥಗಿತ ಮಾಡಲು ತೀರ್ಮಾನಿಸಲಾಗಿದೆ.

Leave a Comment