ಪ್ರತಿಭಟನೆ ವೇಳೆ ಕರವೇ ಕಾರ್ಯಕರ್ತರು ಮಾಲ್ ಒಂದರ ಮುಂಭಾಗದ ಫ್ಲೈಓವರ್ ಮೇಲೆ ನಿಂತು ಮಾಲ್ ಕಡೆಗೆ ಚಪ್ಪಲಿ ತೂರಿದ್ದಾರೆ. ಮಾಲ್‍ಗಳಿಗೆ ರಕ್ಷಣೆ ಒದಗಿಸಲಾಗಿದ್ದು, 100ಕ್ಕೂ ಹೆಚ್ಚು ಪೊಲೀಸರು ಮಾಲ್ ಬಳಿ ಸುತ್ತುವರಿದಿದ್ದಾರೆ. ಕೆಲವೆಡೆ ಪ್ರತಿಭಟನಾಕಾರರು ಕನ್ನಡ ಇಲ್ಲದ ನಾಮಫಲಕಗಳಿಗೆ ಮಸಿ ಬಳಿದಿದ್ದಾರೆ. ಅಲ್ಲದೇ ನಾಮಫಲಕಗಳನ್ನು ಒಡೆದು ಹಾಕಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ವಾಗ್ವಾದಕ್ಕೂ ಕಾರಣವಾಗಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಲಾಠಿ ರುಚಿನೂ ತೋರಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಪಿ ಲಕ್ಷ್ಮಿಪ್ರಸಾದ್, ಪ್ರತಿಭಟನೆ ವೇಳೆ ಅಹಿತಕರ ಘಟನೆ ನಡೆಯದಂತೆ 500 ಪೊಲೀಸರನ್ನು ನಿಯೋಜಿಸಲಾಗಿದೆ. 10 ಬಿಎಂಟಿಸಿ ಬಸ್‍ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ನ್ಯಾಯಾಲಯದ ಆದೇಶ ಇರುವುದರಿಂದ ರ‍್ಯಾಲಿಗೆ ಅವಕಾಶ ಕೊಡುವುದಿಲ್ಲ. ಇದನ್ನೂ ಮೀರಿ ರ್ಯಾಲಿಗೆ ಮುಂದಾದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ಮಹಾನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕನ್ನಡ ನಾಮಫಲಕ ಜಾಗೃತಿ ಆಂದೋಲನ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಹೇಳಿದೆ.ಕರ್ನಾಟಕ ರಕ್ಷಣಾ
ವೇದಿಕೆ ಅಧ್ಯಕ್ಷ ಟಿ. ಎ. ನಾರಾಯಣ ಗೌಡ ಈ ಕುರಿತು ಟ್ವೀಟ್ ಮಾಡಿದ್ದಾರೆ. ಇಂದು ಬೆಂಗಳೂರು ಮಹಾನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ನಾಮಫಲಕ ಜಾಗೃತಿ ಆಂದೋಲನ ಅಭೂತಪೂರ್ವ ಯಶಸ್ಸು ಕಂಡಿದೆ. ಇದಕ್ಕಾಗಿ ನನ್ನೆಲ್ಲ ಸಮರ ಸೇನಾನಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದ್ದಾರೆ.ಪೊಲೀಸ್ ಇಲಾಖೆ ಇವತ್ತಿನ ಹೋರಾಟದ ಹಿನ್ನೆಲೆಯಲ್ಲಿ ನಮ್ಮ ಕಾರ್ಯಕರ್ತರ ವಿರುದ್ಧ ಸುಳ್ಳು ಮೊಕದ್ದಮೆ ಹೂಡುವುದು, ಕಿರುಕುಳ ನೀಡುವುದನ್ನು ಮಾಡಕೂಡದು. ಅಂಥದ್ದೇನಾದರೂ ನಡೆದರೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟಿಸಬೇಕಾಗುತ್ತದೆ ಎಂದು ನಾರಾಯಣ ಗೌಡರು ಎಚ್ಚರಿಕೆ ಕೊಟ್ಟಿದ್ದಾರೆ.














