ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಸಿಬಿಐನಿಂದ ಹಿಂಪಡೆದಿರುವುದು ಪ್ರಜಾಪ್ರಭುತ್ವಕ್ಕೆ ಅಪಮಾನ-ಬಿಜೆಪಿ ಬಿಜೆಪಿ ಪಕ್ಷ ಸಿಬಿಐ ಬಳಸಿಕೊಂಡು ಅಧಿಕಾರ ದುರ್ಬಳಕೆ ಮಾಡುತ್ತಿದೆ- ಕಾಂಗ್ರೆಸ್

Coastal Bulletin
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣವನ್ನು ಸಿಬಿಐನಿಂದ ಹಿಂಪಡೆದಿರುವುದು ಪ್ರಜಾಪ್ರಭುತ್ವಕ್ಕೆ ಅಪಮಾನ-ಬಿಜೆಪಿ ಬಿಜೆಪಿ ಪಕ್ಷ ಸಿಬಿಐ ಬಳಸಿಕೊಂಡು ಅಧಿಕಾರ ದುರ್ಬಳಕೆ ಮಾಡುತ್ತಿದೆ- ಕಾಂಗ್ರೆಸ್

ಬೆಂಗಳೂರು:ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧದ ಪ್ರಕರಣದ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆಯಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಬಿಜೆಪಿ ಮುಖಂಡರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇದು ಅನೈತಿಕ, ಅಕ್ಷಮ್ಯ. ಸರ್ಕಾರದ ಈ ನಿರ್ಧಾರ ವಿರುದ್ಧ ಕೋರ್ಟ್‌ ಮೆಟ್ಟಿಲೇರಲಿದ್ದೇವೆ ಎಂದಿರುವ ಮುಖಂಡರು, ರಾಜ್ಯಪಾಲರು ಈ ವಿಚಾರದಲ್ಲಿ ಮಧ್ಯಪ್ರವೇಶಿಸುವಂತೆಯೂ ಆಗ್ರಹಿಸಿದ್ದಾರೆ.

ಡಿ.ಕೆ.ಶಿವಕುಮಾರ್‌ ವಿರುದ್ಧ ಸಿಬಿಐ ಪ್ರಕರಣವನ್ನು ಸಚಿವ ಸಂಪುಟ ವಾಪಸ್‌ ಪಡೆದಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ. ದೇಶದ ಇತಿಹಾಸದಲ್ಲಿ ಸಿಬಿಐ ಕೇಸ್‌ ಹಿಂಪಡೆದದ್ದು ಇದೇ ಮೊದಲು. ಸರ್ಕಾರ ಬೀಳಲಿದೆ ಎಂಬುದಕ್ಕೆ ಇದು ಮೊದಲ ಹೆಜ್ಜೆ. ಸಿದ್ದರಾಮಯ್ಯ ಅವರ ಸಚಿವ ಸಂಪುಟ ಕಳ್ಳರ ಗುಂಪಾಗಿದೆ ಎಂದು ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರೆ, ಡಿ.ಕೆ.ಶಿವಕುಮಾರ್ ಪ್ರಾಮಾಣಿಕ, ಪಾರದರ್ಶಕವಾಗಿ ಇದ್ದಿದ್ದರೆ ಅವರ ವಿರುದ್ಧದ ಪ್ರಕರಣ ಹಿಂಪಡೆಯುವ ಅಗತ್ಯ ಇರಲಿಲ್ಲ. ಪ್ರಾಮಾಣಿಕತೆ ಇದ್ದಿದ್ದರೆ ಅವರಿಗೆ ಭಯ ಯಾಕೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಪ್ರಶ್ನಿಸಿದ್ದಾರೆ.

ಡಿಕೆಶಿ ಅವರು ಪ್ರಾಮಾಣಿಕರಾಗಿ ಇದ್ದರೆ ಸಚಿವ ಸಂಪುಟದ ತೀರ್ಮಾನವನ್ನು ವಿರೋಧಿಸಬೇಕಿತ್ತು. ಅವರು ವಿರೋಧಿಸದೇ ಇರುವುದರಿಂದ ತಪ್ಪು ಮಾಡಿರುವುದನ್ನು ಅವರು ಒಪ್ಪಿಕೊಂಡಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.

ಡಿಕೆ ಶಿವಕುಮಾರ್ ಕೇಸ್ ವಾಪಸ್ ಪಡೆದ ಪ್ರಕರಣ ವಿಚಾರವಾಗಿ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ,  ಡಿಕೆ ಶಿವಕುಮಾರ್ ಮೇಲೆ ಕೇಸ್

ಕೊಡುವಾಗ ನಿಯಮ ಪಾಲನೆ ಮಾಡಿಲ್ಲ. ಅಂದಿನ ಸಿಎಂ ಮೌಖಿಕವಾಗಿ ಆದೇಶ ಮಾಡಿದ್ರು. ಅಂದಿನ ಸರ್ಕಾರ ಅಡ್ವೋಕೇಟ್ ಜನರಲ್ ಅಭಿಪ್ರಾಯ ಯಾಕೆ ತೆಗೆದುಕೊಂಡಿಲ್ಲ? ಸ್ಪೀಕರ್ ಅನುಮತಿ ಯಾಕೆ ಪಡೆದಿಲ್ಲ? ತಾಂತ್ರಿಕವಾಗಿ ಅವರು ತಪ್ಪು ಮಾಡಿದ್ದಾರೆ. ಅವರು ಮಾಡಿದ್ದು ತಪ್ಪು ಅಂತಾ ನಾವು ಕೇಸ್ ವಾಪಸ್ ತೆಗೆದುಕೊಂಡಿದ್ದೇವೆ ಎಂದರು.

ಸಿಬಿಐ ಅವರು ಮೇಲ್ಮನವಿಗೆ ಹೋಗೋಕೆ ಅವಕಾಶ ಇದ್ದರೆ ಹೈಕೋರ್ಟ್, ಸುಪ್ರೀಂಕೋರ್ಟ್ ಗೆ ಹೋಗಲಿ. ನಾವು ಮಾಡಿದ ನಿರ್ಧಾರ ಸರಿಯಾಗಿದೆ. ಸರಿಯಾಗಿ ಇದೆ ಅಂತಾನೇ ಕೇಸ್ ವಾಪಸ್ ಪಡೆದಿರೋದು. ದೇಶದಲ್ಲಿ ಭ್ರಷ್ಟಾಚಾರಿಗಳು ತುಂಬಿ ತುಳುಕುತ್ತಿರೋ ಪಕ್ಷ ಎಂದರೆ ಬಿಜೆಪಿ ಪಕ್ಷ. ಐಟಿ, ಇಡಿ, ಸಿಬಿಐ ಬಳಸಿಕೊಂಡು ಹೇಗೆಲ್ಲ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆಂಬುದು ಗೊತ್ತಿದೆ. ಅಧಿಕಾರಕ್ಕೆ ಬಂದು ಒಂಬತ್ತೂವರೆ ವರ್ಷ ಏನ್ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತಿದೆ. ಅವರಿಗೆ ಭ್ರಷ್ಟಾಚಾರದ ಬಗ್ಗೆ ಮಾತಾಡೋಕೆ ಯಾವುದೇ ನೈತಿಕತೆ ಇಲ್ಲ. ಬಿಜೆಪಿಯಂತಹ ಭ್ರಷ್ಟಾಚಾರ ಪಕ್ಷ ಮತ್ತೊಂದಿಲ್ಲ ಎಂದು ಕಿಡಿ ಕಾರಿದರು.

Leave a Comment