ಬೆಂಗಳೂರು: ಬೆಂಗಳೂರು-ಮಂಗಳೂರು ರೈಲ್ವೆ ಪ್ರಯಾಣಿಕರಿಗೆ ಕೇಂದ್ರ ರೈಲ್ವೆ ಸಚಿವಾಲಯ ಸಂತೋದ ಸುದ್ದಿ ನೀಡಿದೆ. ವಾರದಲ್ಲಿ ಮೂರು ದಿನ ಸಂಚರಿಸುತ್ತಿದ್ದ ಮೈಸೂರು ಮಾರ್ಗವಾಗಿ ಬೆಂಗಳೂರು-ಮಂಗಳೂರು ರೈಲು ಸೇವೆಯನ್ನು, ಆರು ದಿನಗಳಿಗೆ ಹೆಚ್ಚಿಸುವಂತೆ ನೈಋತ್ಯ ರೈಲ್ವೆಯ ಪ್ರಸ್ತಾವನೆಗೆ ಕೇಂದ್ರ ರೈಲ್ವೇ ಸಚಿವಾಲಯ ಅನುಮೋದನೆ ನೀಡಿದೆ. ಇನ್ನು ಕೆಲವೇ ದಿನಗಳಲ್ಲಿ ವಾರದಲ್ಲಿ ಆರು ದಿನ ಬೆಂಗಳೂರು-ಮಂಗಳೂರು ರೈಲು ಮೈಸೂರು ಮಾರ್ಗವಾಗಿ ಸಂಚರಿಸಲಿದೆ.
ರೈಲು ಸಂಖ್ಯೆ 16585/586 ರ ಸಂಚಾರವನ್ನು ಹೆಚ್ಚಿಸಲು ನೈಋತ್ಯ ರೈಲ್ವೆ ಜುಲೈ 27 ರಂದು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ರೈಲ್ವೆ ಸಚಿವಾಲಯವು ಆಗಸ್ಟ್ 17 ರಂದು ರೈಲು ಸಂಖ್ಯೆ 06547/548 ರ ಬೆಂಗಳೂರು-ಮಂಗಳೂರು ಎಕ್ಸ್‌ಪ್ರೆಸ್ ಸೇವೆಗಳನ್ನು ಕ್ರಮಬದ್ಧಗೊಳಿಸುವ ಮೂಲಕ ರೈಲು ಸಂಚಾರವನ್ನು ವಾರಕ್ಕೆ ಆರು ದಿನಗಳವರೆಗೆ ಹೆಚ್ಚಿಸುವ ಪ್ರಸ್ತಾಪವನ್ನು ಅನುಮೋದಿಸಿದೆ ಎಂದು ತಿಳಿಸಿದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪು ತಾಲೂಕಿನ ಹಲವು ಭಾಗಗಳಲ್ಲಿ ಪದೇ ಪದೇ ಭೂಕುಸಿತ ಸಂಭವಿಸಿ ರಸ್ತೆ ಸಾರಿಗೆಗೆ ತೀವ್ರ ಅಡಚಣೆಯಾದ ಕಾರಣ, ಪ್ರಯಾಣಿಕರ ಬೇಡಿಕೆಯ ಮೇರೆಗೆ ವಿಶೇಷ ರೈಲನ್ನು ಇತ್ತೀಚೆಗೆ ಪರಿಚಯಿಸಲಾಯಿತು.
ರೈಲಿನ ಟರ್ಮಿನಲ್ ಅನ್ನು ಪ್ರಸ್ತುತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಬೆಂಗಳೂರು ಸಿಟಿ ಜಂಕ್ಷನ್‌ನಿಂದ ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ, ಬೈಯಪ್ಪನಹಳ್ಳಿ (ಎಸ್‌ಎಂವಿಬಿ) ಗೆ ಸ್ಥಳಾಂತರಿಸಲಾಗುವುದು ಎಂದು
ಸಚಿವಾಲಯ ತಿಳಿಸಿದೆ. ಬದಲಾವಣೆ ದಿನಾಂಕವನ್ನು ನೈಋತ್ಯ ರೈಲ್ವೆ ಅನುಕೂಲದ ಮೇಲೆ ನಿರ್ಧರಿಸಲಾಗುತ್ತದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.
ಟರ್ಮಿನಲ್ ಸ್ಥಳಾಂತರದ ಹೊರತಾಗಿಯೂ, ರೈಲು ಅದರ ಹಿಂದಿನ ಮಾರ್ಗವಾದ ಬೆಂಗಳೂರು ನಗರದ ಮೂಲಕ ಕಂಟೋನ್ಮೆಂಟ್, ಸಿಟಿ ಮತ್ತು ಕೆಂಗೇರಿ ಮಾರ್ಗವಾಗಿ ಚಲಿಸುತ್ತದೆ ಎಂದು ಹೇಳಿದೆ.
ಈ ಸೇವೆಯನ್ನು ಕಾರವಾರ ಅಥವಾ ವಾಸ್ಕೋ-ಡ-ಗಾಮಾ ತನಕ ವಿಸ್ತರಿಸಬೇಕೆಂಬ ಬೇಡಿಕೆಯು ಹೆಚ್ಚಾಗುತ್ತಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ಈಗಾಗಲೇ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಕಾರವಾರಕ್ಕೆ ವಿಸ್ತರಣೆ ಮಾಡುವಂತೆ ಕೋರಿದ್ದಾರೆ. ಮೈಸೂರು ಮತ್ತು ಗೋವಾದ ಎರಡು ಜನಪ್ರಿಯ ಪ್ರವಾಸಿ ತಾಣಗಳ ನಡುವೆ ಸಂಪರ್ಕವನ್ನು ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.
ಮೈಸೂರು ಗ್ರಾಹಕ ಪರಿಷತ್ತಿನ ಯೋಗೇಂದ್ರ ಸ್ವಾಮಿ, ವಾಸ್ಕೋ-ಡ-ಗಾಮಾ ತನಕ ರೈಲು ಸೇವೆಯ ವಿಸ್ತರಣೆಯಾದರೆ ನೈಋತ್ಯ ರೈಲ್ವೆ ಮತ್ತು ಪ್ರಯಾಣಿಸುವ ಸಾರ್ವಜನಿಕರಿಗೆ ಗೆಲುವು ಸಿಕ್ಕಂತಾಗುತ್ತದೆ ಎಂದು ಹೇಳಿದರು.
















