ಉಡುಪಿ: ರಾಜ್ಯದಲ್ಲಿ ಅತ್ಯಂತ ವಿವಾದವನ್ನು ಸೃಷ್ಟಿಸಿರುವ ಉಡುಪಿಯ ಕಾಲೇಜಿನ ಶೌಚಗೃಹದಲ್ಲಿ ಹಿಂದೂ ಯುವತಿಯರ ಅರೆನಗ್ನ ವೀಡಿಯೋ ಸೆರೆ ಹಿಡಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಾರದ ನಂತರ ಕಾಲೇಜು ಆಡಳಿತ ಮಂಡಳಿಯು ಸ್ಪಷ್ಟೀಕರಣವನ್ನು ನೀಡಿದೆ.
ಉಡುಪಿಯ ಪ್ರತಿಷ್ಠಿತ ಕಾಲೇಜು ಶೌಚಾಲಯದಲ್ಲಿ ವಿದ್ಯಾರ್ಥಿನಿಯರ ಮೊಬೈಲ್ ಚಿತ್ರೀಕರಣದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೇತ್ರಾಜ್ಯೋತಿ ಕಾಲೇಜು ಆಡಳಿತ ಮಂಡಳಿ ನಿರ್ದೇಶಕಿ ರಶ್ಮೀ ಕೃಷ್ಣಪ್ರಸಾದ್ ಅವರು, ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಮಾಡಿರುವುದು ನಿಜ. ಇನ್ನು ಮೂವರು ಒಂದೇ ಕ್ಲಾಸ್ ಆಗಿದ್ದು, ಇನ್ನೊಬ್ಬಳು ಹುಡುಗಿ ಬೇರೆ ತರಗತಿಯವಳು. ಇನ್ನು ನಮಗೆ ವಿಚಾರ ತಿಳಿದ ಕೂಡಲೆ ವಿಚಾರಣೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಮಕ್ಕಳು ತಪ್ಪೊಪ್ಪಿಗೆ ಕೊಟ್ಟ ನಂತರವೂ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಕಾಲೇಜ್ ಗೆ ಮೊಬೈಲ್ ತರುವಂತಿಲ್ಲ, ಕಾನೂನು ಮೀರಿದ ಕಾರಣ ಮೊಬೈಲನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ. ತಮಾಷೆಯ ವೀಡಿಯೋ ಮಾಡಿರುವುದಾಗಿ ಮೂವರು ಹೇಳಿದ್ದಾರೆ. ಮೊಬೈಲ್ ಕೊಡುವಾಗಲೇ ಅದರಲ್ಲಿ ವೀಡಿಯೋ ಇರಲಿಲ್ಲ. ವಾಶ್ ರೂಮ್ ಗೆ ಹೋದಾಗ ಮೊಬೈಲ್ ನೋಡಿದೆ, ತಕ್ಷಣ ಹೊರಗೆ ಬಂದೆ. ಸ್ಥಳದಲ್ಲೇ ವಿಡಿಯೋ ಡಿಲೀಟ್ ಮಾಡಿಸಿರುವುದಾಗಿ ಯುವತಿ ಹೇಳಿದ್ದಾಳೆ ಎಂದರು.
ಇಂತಹ ಘಟನೆ ನಡೆಯಬಾರದು ಎಂಬ ಕಾರಣಕ್ಕೆ ಮೊಬೈಲ್ ಬ್ಯಾನ್ ಮಾಡಿದ್ದೇವೆ.
ನಮ್ಮ ಜವಾಬ್ದಾರಿ ಸುರಕ್ಷತೆ ಹಾಗಾಗಿ ನಿಯಮ ಮಾಡಿದ್ದೇವೆ. ಇನ್ನು ವೀಡಿಯೋ ಚಿತ್ರೀಕರಣ ಮಾಡಿದವರ ವಿರುದ್ಧ ಸಂತ್ರಸ್ತೆ ಯಾವುದೇ ದೂರು ಕೊಟ್ಟಿಲ್ಲ. ಒಂದೇ ಕಾಲೇಜ್ ಮೇಟ್ ಆಗಿರುವ ಕಾರಣ ದೂರು ಕೊಡಲ್ಲ ಎಂದಿದ್ದಾಳೆ. ನಿಷೇಧ ಮಾಡಿದ್ದರೂ ಕಾಲೇಜಿಗೆ ಮೊಬೈಲ್ ತಂದದ್ದು, ಶೂಟ್ ಮಾಡಿದ್ದು ತಪ್ಪು. ಹಾಗಾಗಿ ಮೊಬೈಲ್ ತಂದು ವೀಡಿಯೋ ಚಿತ್ರೀಕರಣ ಮಾಡಿದ ವಿದ್ಯಾರ್ಥಿನಿಯರನ್ನು ಸಸ್ಪೆಂಡ್ ಮಾಡಿದ್ದೇವೆ. ನೂರಾರು ವಿದ್ಯಾರ್ಥಿನಿಯರ ಚಿತ್ರೀಕರಣ ಮಾಡಲಾಗಿದೆ ಎಂಬುದು ಸರಿಯಲ್ಲ. ವಿಚಾರ ತಿಳಿಯದೆ ತಪ್ಪು ಮಾಹಿತಿ ಯಾರೂ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ಇನ್ನು ಯಾರೊಬ್ಬರೂ ಸುಳ್ಳು ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡಬೇಡಿ. ಕಾಲೇಜಿನ ಮಕ್ಕಳಲ್ಲಿ ನಾವು ಧರ್ಮವನ್ನು ನೋಡಲ್ಲ. ಚಿತ್ರೀಕರಿಸಿದ ಧರ್ಮದವರೇ ಕಾಲೇಜಿನಲ್ಲಿ ಘಟನೆ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ತಮಾಷೆಗೆ ಮಾಡಿರುವುದರಿಂದ ನನ್ನ ಭವಿಷ್ಯ, ಆ ಮೂವರ ಭವಿಷ್ಯ ಮುಖ್ಯ ಅಂತ ಸಂತ್ರಸ್ಥೆ ಬರೆದು ನೀಡಿದ್ದಾಳೆ ಎಂದು ಕಾಲೇಜು ಆಡಳಿತ ಮಂಡಳಿಯ ನಿರ್ದೇಶಕಿ ರಶ್ಮೀ ಕೃಷ್ಣಪ್ರಸಾದ್ ಮಾಹಿತಿಯನ್ನು ನೀಡಿದ್ದಾರೆ.















