ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಮೀಸಲಾತಿ ಕುರಿತು ಸಮುದಾಯಗಳು ನಡೆಸುತ್ತಿದ್ದ ಹೋರಾಟಕ್ಕೆ ಅಳೆದು ತೂಗಿ ನ್ಯಾಯ ಒದಗಿಸುವ ಯತ್ನ ಮಾಡಿದ್ದಾರೆ. ಹೀಗಾಗಿ ಮೀಸಲಾತಿಯಲ್ಲಿ ಕೆಲ ಬದಲಾವಣೆಗಳು ಆಗಿವೆ. ಲಿಂಗಾಯಿತರಿಗೆ ಶೇಕಡಾ 7, ಒಕ್ಕಲಿಗರಿಗೆ ಶೇಕಡಾ 6 ರಷ್ಟು ಮೀಸಲಾತಿ ಘೋಷಿಸಲಾಗಿದೆ. ಇನ್ನು ಪ್ರವರ್ಗ ಒಂದಕ್ಕೆ 4 ಪರ್ಸೆಂಟ್ ಮೀಸಲಾತಿ ನೀಡಲಾಗಿದ್ದರೆ, ದಲಿತ ಬಲ ಸಮುದಾಯಕ್ಕೆ 5.5ರಷ್ಟು ಮೀಸಲಾತಿ ನೀಡಲಾಗಿದೆ. ಮುಸ್ಲಿಮರ ಒಬಿಸಿ ಮೀಸಲಾತಿ ರದ್ದು ಮಾಡಿರುವ ಸರ್ಕಾರ, ಅವರನ್ನು ಆರ್ಥಿಕ ಹಿಂದುಳಿದ ಪಟ್ಟಿಗೆ ಸೇರಿಸಲಾಗಿದೆ.
ಹಿಂದುಳಿದ ವರ್ಗಗಳ ಅಡಿಯಲ್ಲಿದ್ದ ಮುಸ್ಲಿಮರ ಮೀಸಲಾತಿ ರದ್ದು ಮಾಡಲಾಗಿದೆ. 2ಬಿ ಪ್ರವರ್ಗದಲ್ಲಿ ಮುಸ್ಲಿಮರಿಗೆ ರಾಜ್ಯದಲ್ಲಿ ಶೇಕಡಾ 4 ರಷ್ಟು ಮೀಸಲಾತಿ ನೀಡಲಾಗಿತ್ತು. ಇದನ್ನು ರದ್ದು ಪಡಿಸಿ ಇದೀಗ ಆರ್ಥಿಕವಾಗಿ ಹಿಂದುಳಿದವರ ಪಟ್ಟಿಗೆ ಮುಸ್ಲಿಮರನ್ನು ಸೇರಿಸಲಾಗಿದೆ. ಮುಸ್ಲಿಮರಿಗೆ ಒಬಿಸಿಯಲ್ಲಿ ಶೇಕಡಾ 4 ರಷ್ಟು ಮೀಸಲಾತಿಯನ್ನು ಲಿಂಗಾಯಿತ ಹಾಗೂ ಒಕ್ಕಲಿಗರಿಗೆ ಹಂಚಿಕೆ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ರಷ್ಟು ಮೀಸಲಾತಿ ಇದೆ.
ಕಳೆದ 2 ವರ್ಷದಿಂದ
ಹೋರಾಟ ನಡೆಸುತ್ತಿರುವ ಲಿಂಗಾಯಿತ ಪಂಚಮಸಾಲಿ ಸಮುದಾಯದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ. ಲಿಂಗಾಯಿತ ಸಮುದಾಯಕ್ಕೆ ಶೇಕಡಾ 7 ರಷ್ಟು ಮೀಸಲಾತಿ ನೀಡಲಾಗಿದೆ. ನಮ್ಮ ಬೇಡಿಕೆ ಶೇಕಡಾ 15. ಬಸವರಾಜ್ ಬೊಮ್ಮಾಯಿ ಮೀಸಲಾತಿ ನೀಡುವ ಪ್ರಯತ್ನ ಮಾಡಿದ್ದಾರೆ. ಈ ಕುರಿತು ಕಾನೂನು ತಜ್ಞರು, ಸಮುದಾಯ ಮುಖಂಡರ ಜೊತೆ ಚರ್ಚೆ ಮಾಡಿ ನಾಳೆ ಸುದ್ದಿಗೋಷ್ಠಿಯಲ್ಲಿ ನಮ್ಮ ನಿರ್ಧಾರ ಪ್ರಕಟಿಸುವುದಾಗಿ ಸ್ವಾಮೀಜಿ ಹೇಳಿದ್ದಾರೆ. ಅಲ್ಲೀವರೆಗೆ ಯಾರೂ ಕೂಡ ವಿಜಯೋತ್ಸವ ಆಚರಿಸಬಾರದು ಎಂದಿದ್ದಾರೆ.














