ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಹಿಂಪಡೆದಿದೆ. ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣವನ್ನ ಹಿಂಪಡೆಯುವ ಬಗ್ಗೆ ಗೃಹ ಇಲಾಖೆ ಸಚಿವ ಸಂಪುಟಕ್ಕೆ ಪ್ರಸ್ತಾವನೆ ಸಲ್ಲಿಸಿ ಒಪ್ಪಿಗೆ ಪಡೆದುಕೊಳ್ಳಲಾಗಿದೆ. ಪ್ರಸ್ತಾವನೆಯಲ್ಲಿ ಪ್ರಕರಣವನ್ನ ಸಿಬಿಐನಿಂದ ಹಿಂಪಡೆದು ರಾಜ್ಯ ಪೊಲೀಸ್ ಇಲಾಖೆಗೋ ಅಥವಾ ಲೋಕಾಯುಕ್ತ ಪೊಲೀಸ್ ತನಿಖೆಗೆ ಹಸ್ತಾಂತರಿಸಲು ಅನುಮೋದನೆ ನೀಡುವಂತೆ ಪ್ರಸ್ತಾಪನೆ ಸಲ್ಲಿಸಿದೆ. ಈ ಹಿಂದೆ ಡಿಕೆ ಶಿವಕುಮಾರ್ ವಿರುದ್ಧದ ಕೇಸ್ ಅನ್ನು 2019ರಲ್ಲಿ ಸಿಬಿಐಗೆ ಹಸ್ತಾಂತರ ಮಾಡಿತ್ತು. ಇದೀಗ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣದ ಸಿಬಿಐ ತನಿಖೆಗೆ ಕೊಟ್ಟಿರುವ ಅನುಮತಿ ಹಿಂಪಡೆಯಲು ಸಂಪುಟ ಸದಸ್ಯರು ಸಹಮತ ವ್ಯಕ್ತಪಡಿಸಿದೆ.
ಸಂಪುಟ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆಗೆ ರಾಜಕೀಯ ಪ್ರೇರಿತ ಪ್ರಕರಣ ಅಂತ ಸಂಪುಟ ಸದಸ್ಯರು ಅಭಿಪ್ರಾಯ ಪಟ್ಟಿದ್ದಾರೆ. ಪ್ರಕರಣ ವಾಪಸ್ ತೆಗೆದುಕೊಳ್ಳುವ ಬಗ್ಗೆ ಸರ್ಕಾರ ತೀರ್ಮಾನ ಮಾಡಿದೆ ಅಂತ ಸಚಿವ ಎಚ್ಕೆ ಪಾಟೀಲ್ ಕ್ಯಾಬಿನೇಟ್ ಸಭೆಯ ಬಳಿಕ ಮಾಹಿತಿ ನೀಡಿದ್ದಾರೆ.ಈ ಹಿಂದೆ ಡಿಕೆ ಶಿವಕುಮಾರ್ ವಿರುದ್ಧದ ಪ್ರಕರಣ ಸಿಬಿಐ
ತನಿಖೆಗೆ ನೀಡುವಂತಹ ಪ್ರಕರಣ ಇದಲ್ಲ ಎಂದು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಡ್ವೋಕೇಟ್ ಜನರಲ್ ಆಗಿದ್ದಾಗ ಪ್ರಭುಲಿಂಗ ನಾವದಗಿ ಅವರು ವಿರೋಧಿಸಿದ್ದರು. ಪ್ರಭುಲಿಂಗ ನಾವದಗಿ ಪ್ರಸ್ತಾವನೆಯನ್ನು ಮುಂದಿಟ್ಟುಕೊಂಡು ಎಜಿ ಶಶಿಕಿರಣ್ ಶೆಟ್ಟಿ ವರದಿ ಸಲ್ಲಿಸಿದ್ದಾರಂತೆ.
ಬಹುತೇಕ ಮುಕ್ತಾಯ ಹಂತದಲ್ಲಿರುವ ಅಕ್ರಮ ಆಸ್ತಿಗಳಿಕೆಯ ಈ ತನಿಖೆಯನ್ನು ವಾಪಾಸ್ ಪಡೆಯಲು ಕಾನೂನಿನಲ್ಲಿ ಅವಕಾಶ ಇದೆಯಾ ಅಂತ ಕಾದು ನೋಡಬೇಕಾಗಿದೆ.














