ಬೆಂಗಳೂರು: ನನಗೆ ಸಿಎಂ ಮಾಡುವುದು ಗೊತ್ತಿದೆ. ಅವರನ್ನು ಕೆಳಕ್ಕೆ ಇಳಿಸುವುದು ಗೊತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹರಿಹಾಯ್ದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಾಂಗ್ರೆಸ್ ಮುಖಂಡ ಬಿ ಕೆ ಹರಿಪ್ರಸಾದ್ ಗೆ ಸಚಿವ ಸ್ಥಾನ ನೀಡುವ ಭರವಸೆ ಇತ್ತು. ಆದರೆ, ಕೊನೆ ಕ್ಷಣದಲ್ಲಿ ಬಿ ಕೆ ಹರಿಪ್ರಸಾದ್ ಅವರಿಗೆ ಸಚಿವ ಸ್ಥಾನ ಕೈತಪ್ಪಿದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈಡಿಗ, ಬಿಲ್ಲವ, ದೀವರ ಮುಖಂಡರ ಸಭೆಯಲ್ಲಿ ಬಿ ಕೆ ಹರಿಪ್ರಸಾದ್ ಆಡಿರುವ ಮಾತು ಸದ್ಯ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಮ್ಮನ್ನು ಬಹಳ ವ್ಯವಸ್ಥಿತವಾಗಿ ತುಳಿಯುತ್ತಾರೆ. ನಾನು ಮಂತ್ರಿ ಆಗೋದು ಬಿಡುವುದು ಬೇರೆ ಪ್ರಶ್ನೆ. ಆದರೆ ದೇಶದ ಬೇರೆ ರಾಜ್ಯಗಳಲ್ಲಿನ ಐವರು ಮುಖ್ಯಮಂತ್ರಿ ಆಯ್ಕೆಯಲ್ಲಿ ನಾನು ಪ್ರಮುಖ ಪಾತ್ರ ವಹಿಸಿದ್ದೇನೆ ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಟಾಂಗ್ ನೀಡಿದ್ದಾರೆ.
ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ ಅಸಮಾಧಾನ
ವ್ಯಕ್ತಪಡಿಸಿದ ಕಾಂಗ್ರೆಸ್ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್, ನಾನು ಯಾರ ಬಳಿಯೂ ಭಿಕ್ಷೆ ಬೇಡುವುದಿಲ್ಲ, ಎದೆ ಕೊಟ್ಟು ನಿಲ್ಲುತ್ತೇನೆ. ಇಲ್ಲ ಅಂದಿದ್ದರೇ ಬೆಂಗಳೂರಿನಲ್ಲಿ 49 ವರ್ಷಗಳ ಕಾಲ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ನಮ್ಮನ್ನು ಓಡಿಸಿ ಬಿಡುತ್ತಿದ್ದರು. ಛತ್ತೀಸ್ಗಡ ಮುಖ್ಯಮಂತ್ರಿ ನಮ್ಮ ನೆಂಟರು ಅಲ್ಲ, ಹಾಗಿದ್ದರೂ ಹಿಂದುಳಿದ ವರ್ಗದವರನ್ನು ಸಿಎಂ ಮಾಡಿದ್ದೇನೆ. ನನಗೆ ಮುಖ್ಯಮಂತ್ರಿ ಮಾಡೋದು ಚೆನ್ನಾಗಿ ಗೊತ್ತಿದೆ. ಮುಖ್ಯಮಂತ್ರಿಗಳನ್ನು ಕೆಳಗೆ ಇಳಿಸೋದು ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಸೇರಿದವರು. ಎಲ್ಲರೂ ಒಟ್ಟಿಗೆ ಸೇರಬೇಕು ಎಂದು ನಾವು 2013 ರಲ್ಲಿ ಬೆಂಬಲ ಕೊಟ್ಟಿದ್ದೆವು.ಕರ್ನಾಟಕದಲ್ಲಿ ರಾಜಕೀಯವಾಗಿ ಈಡಿಗ ಸಮುದಾಯದವರು ಮುಂದೆ ಬರುತ್ತಿಲ್ಲ. ಏನೇ ಪ್ರಯತ್ನ ಮಾಡಿದ್ರು ಆಗುತ್ತಿಲ್ಲ. ಅವಕಾಶ ವಂಚಿರಾಗುತ್ತಿರುವುದು ನೋಡಿದರೆ ಯಾರದ್ದೊ ಷಡ್ಯಂತ್ರಕ್ಕೆ ಬಲಿಯಾಗುತ್ತಿದ್ದೇವೆ ಅನ್ನಿಸುತ್ತದೆ ಎಂದು ಹೇಳಿದರು.















