ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಇವರ ತಾಯಿ ಭವಾನಿ ರೇವಣ್ಣ ವಿರುದ್ಧ ಕಿಡ್ನಾಪ್ ಆರೋಪ ಕೇಳಿಬಂದಿದೆ. ಈ ಬಗ್ಗೆ ಪ್ರಜ್ವಲ್ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ದಕ್ಷಿಣ ವಲಯ ಐಜಿಪಿಗೆ ದೂರು ನೀಡಿದ್ದಾರೆ. ಆಸ್ತಿ ಮಾರಾಟ ಮಾಡಲು ಒತ್ತಾಯಿಸಿ ಕಿಡ್ನಾಪ್ ಮಾಡಿರುವ ಆರೋಪ ಮಾಡಲಾಗಿದೆ.
ಕಾರ್ತಿಕ್ ದಶಕಗಳ ಕಾಲ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕನಾಗಿದ್ದರು. ಆದರೆ, ಹೊಳೆನರಸೀಪುರ ತಾಲೂಕಿನಲ್ಲಿರುವ 13 ಎಕರೆ ಭೂಮಿಯನ್ನು ಮಾರಾಟ ಮಾಡುವಂತೆ ಒತ್ತಾಯಿಸಿ ತನ್ನನ್ನು ಹಾಗೂ ತನ್ನ ಪತ್ನಿಯನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಕಾರ್ತಿಕ್, ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
2023 ರ ಮಾರ್ಚ್ 12 ರಂದು ಕಿಡ್ನಾಪ್ ಮಾಡಿದ್ದು, ಏಪ್ರಿಲ್ ತಿಂಗಳಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಸಹಿತ ಇನ್ನಿತರ ದಾಖಲೆಗಳನ್ನು ಪೊಲೀಸರಿಗೆ ನೀಡಿದ್ದರು. ಬಲವಂತವಾಗಿ ಕರೆದೊಯ್ದು ನನ್ನ 13 ಎಕರೆ ಭೂಮಿಯನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆ
ನ್ಯಾಯ ಒದಗಿಸಿಕೊಡುವಂತೆ ಮಾಧ್ಯಮದ ಮುಂದೆ ಅಳಲುತೋಡಿಕೊಂಡಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಭವಾನಿ ರೇವಣ್ಣ ಭಾರೀ ಸುದ್ದಿ ಮಾಡಿದ್ದರು. ತಮ್ಮ ಕಾರಿಗೆ ಅಡ್ಡ ಬಂದಿದ್ದ ಬೈಕ್ ಸವಾರನಿಗೆ ಹಿಗ್ಗಾಮುಗ್ಗ ಬೈಯ್ದಿದ್ದರು. ನನ್ನದು ಒಂದೂವರೆ ಕೋಟಿ ಕಾರು, ನಿಂಗೆ ಸಾಯೋಕೆ ಈ ಕಾರೇ ಬೇಕಿತ್ತಾ? ಬೇರೆ ಯಾವುದಾದರೂ ಬಸ್ಸಿಗೆ ಸಿಕ್ಕಿ ಸಾಯಿ ಎನ್ನುವಂತೆ ಬೈಯ್ದಿದ್ದರು. ಗೌಡರ ಸೊಸೆ ವರ್ತನೆಗೆ ರಾಜ್ಯಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಖುದ್ದು ಎಚ್‌ಡಿ ರೇವಣ್ಣ ಅವರೇ ಕ್ಷಮೆ ಯಾಚಿಸಿದ್ದರು. ಎಲ್ಲವೂ ತಣ್ಣಗಾಯ್ತು ಎನ್ನುತ್ತಿರುವಂತೆ ಮತ್ತೆ ಭವಾನಿ ರೇವಣ್ಣ ಹಾಗೂ ಹಾಸನ ಸಂಸದರೂ (Hassan MP) ಆಗಿರುವ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.














