ಅಯೋಧ್ಯೆ: ಮುಂದಿನ ತಿಂಗಳು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಹಿರಿಯರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರಿಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಆಹ್ವಾನ ನೀಡಿದೆ. ಸಾಕಷ್ಟು ಸ್ವಾಮೀಜಿಗಳಿಗೆ ಹಾಗೂ ಹಿರಿಯ ರಾಜಕಾರಣಿಗಳಿಗೆ ಆಹ್ವಾನ ನೀಡಿತ್ತು. ಆದರೆ. ರಾಮಮಂದಿರಕ್ಕಾಗಿ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದ ಅಡ್ವಾಣಿ ಮತ್ತು ಜೋಶಿ ಇಬ್ಬರನ್ನು ವಯಸ್ಸಿನ ಕಾರಣ ಹೇಳಿ ಟ್ರಸ್ಟ್ ಕೈಬಿಟ್ಟಿತ್ತು. ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೆ ಇಬ್ಬರು ನಾಯಕರಿಗೆ ಆಹ್ವಾನ ನೀಡಲಾಗಿದೆ.
ಜನವರಿ 22, 2024 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರದ ಪ್ರಾಣ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಾಲ್ ಕೃಷ್ಣ ಅಡ್ವಾಣಿ ಮತ್ತು ರಾಮಮಂದಿರ ಚಳವಳಿಯ ಹರಿಕಾರ ಡಾ. ಮುರಳಿ ಮನೋಹರ ಜೋಶಿ ಅವರನ್ನು ಆಹ್ವಾನಿಸಲಾಗಿದೆ. ಇಬ್ಬರೂ ಹಿರಿಯರು ಭಾಗವಹಿಸುವುದಾಗಿ ಭರವಸೆ ನೀಡಿದ್ದಾರೆ " ಎಂದು ವಿಶ್ವ ಹಿಂದೂ ಪರಿಷತ್ ಸದಸ್ಯ ಅಲೋಕ್ ಕುಮಾರ್ ಹೇಳಿದರು.
ಇನ್ನು ಆಡ್ವಾಣಿ ಅವರನ್ನು ಆಹ್ವಾನಿಸದಿದ್ದದ್ದು ರಾಜಕೀಯ ತಿರುವು ಪಡೆದುಕೊಂಡಿತ್ತು. ಬಿಜೆಪಿ ನಾಯಕರು ಅಡ್ವಾಣಿ ಅವರನ್ನು ಕಡೆಗಣಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಸೇರಿದಂತೆ ಇತರೆ ನಾಯಕರು ಕಿಡಿಕಾರಿದ್ದರು.
ರಾಮಮಂದಿರ ಚಳವಳಿಯ ಮುಂಚೂಣಿಯಲ್ಲಿದ್ದ ಬಿಜೆಪಿ ಮುತ್ಸದ್ಧಿಗಳಾದ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ ಜೋಶಿಯವರು ವಯಸ್ಸು ಮತ್ತು ಆರೋಗ್ಯಸಮಸ್ಯೆ ಹಿನ್ನೆಲೆಯಲ್ಲಿ ಮುಂದಿನ ತಿಂಗಳು ನಡೆಯುವ ರಾಮಮಂದಿರ
ಉದ್ಘಾಟನಾ ಸಮಾರಂಭಕ್ಕೆ ಗೈರುಹಾಜರಾಗುವ ಸಾಧ್ಯತೆಗಳಿವೆ ಎಂದು ಮಂದಿರ ಟ್ರಸ್ಟ್ ಮಾಧ್ಯಮ ಹೇಳಿಕೆ ನೀಡಿತ್ತು.
"ಕುಟುಂಬದ ಅತ್ಯಂತ ಹಿರಿಯರಾಗಿರುವ ಇಬ್ಬರು ಮುಖಂಡರ ವಯಸ್ಸಿನ ಹಿನ್ನೆಲೆಯಲ್ಲಿ ಅವರು ಸಮಾರಂಭಕ್ಕೆ ಆಗಮಿಸದಂತೆ ಮನವಿ ಮಾಡಿಕೊಳ್ಳಲಾಗಿದ್ದು, ಇದಕ್ಕೆ ಇಬ್ಬರೂ ಒಪ್ಪಿಕೊಂಡಿದ್ದಾರೆ" ಎಂದು ರಾಮಮಂದಿರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸುದ್ದಿಗಾರರಿಗೆ ತಿಳಿಸಿದ್ದರು.
ಅಡ್ವಾಣಿಗೆ 96 ವರ್ಷ ವಯಸ್ಸಾಗಿದ್ದು, ಮುರಳಿ ಮನೋಹರ ಜೋಶಿಯವರು ಮುಂದಿನ ತಿಂಗಳು 90ಕ್ಕೆ ಕಾಲಿಡಲಿದ್ದಾರೆ. ಜನವರಿ 22ರಂದು ನಡೆಯುವ ಪ್ರತಿಷ್ಠೆ ಕಾರ್ಯಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇದರಲ್ಲಿ ಭಾಗವಹಿಸುತ್ತಿದ್ದಾರೆ ಎಂದು ರಾಯ್ ಸ್ಪಷ್ಟಪಡಿಸಿದ್ದರು.
ಜನವರಿ 15ರ ವೇಳೆಗೆ ಎಲ್ಲ ಸಿದ್ಧತೆಗಳು ಪೂರ್ಣಗೊಳ್ಳಲಿದ್ದು, ಪ್ರಾಣ ಪ್ರತಿಷ್ಠೆಯ ಪೂಜಾ ವಿಧಿವಿಧಾನಗಳು ಜನವರಿ 16ರಂದು ಆರಂಭವಾಗಿ 22ರವರೆಗೂ ಮುಂದುವರಿಯಲಿವೆ.














