ಮಂಗಳೂರಿನಲ್ಲಿ ಮತ್ತೆ ಧರ್ಮ ದಂಗಲ್- ವಿಹಿಂಪ ನಾಯಕ ಶರಣ್ ಪಂಪ್ವೆಲ್ ವಿರುದ್ಧ ಕೇಸು ದಾಖಲು.

Coastal Bulletin
ಮಂಗಳೂರಿನಲ್ಲಿ ಮತ್ತೆ ಧರ್ಮ ದಂಗಲ್- ವಿಹಿಂಪ ನಾಯಕ ಶರಣ್ ಪಂಪ್ವೆಲ್ ವಿರುದ್ಧ ಕೇಸು ದಾಖಲು.

ಮಂಗಳೂರು: ಮಂಗಳಾದೇವಿ ದೇವಸ್ಥಾನದಲ್ಲಿ ವ್ಯಾಪಾರ ಧರ್ಮ ದಂಗಲ್ ವಿಚಾರಕ್ಕೆ ಸಂಬಂಧಿಸಿದಂತೆ ಮುಸ್ಲಿಮರ ಜೊತೆ ವ್ಯಾಪಾರ ಮಾಡದಂತೆ ಕರೆ ಕೊಟ್ಟ ವಿಎಚ್‌ಪಿ ಮುಖಂಡ ಶರಣ್ ಪಂಪ್ ವೆಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇಂದು(ಬುಧವಾರ) ಬೆಳಿಗ್ಗೆ ಸಮಾನ ಮನಸ್ಕ ಸಂಘಟನೆಗಳು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ಬೆನ್ನಲ್ಲೇ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಮಂಗಳಾದೇವಿಯ ಹಿಂದೂಗಳ ಸ್ಟಾಲ್ ಗಳಿಗೆ ಭಗವಾಧ್ಬಜ ಕಟ್ಟಿದ್ದರು.‌ ಹಿಂದೂಗಳು‌ ಭಗವಾಧ್ಬಜ ಇದ್ದ ಸ್ಟಾಲ್ ಗಳಲ್ಲೇ ವ್ಯಾಪಾರ ನಡೆಸಬೇಕು ಎಂದು ಶರಣ್ ಕರೆ ಕೊಟ್ಟಿದ್ದರು. ಇದೀಗ ಪಾಂಡೇಶ್ವರ ಪೊಲೀಸರಿಂದ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದ್ದು, ಐಪಿಸಿ 153A, 34 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಶಾಂತಿಭಂಗ ಹಾಗೂ ಕೋಮು ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ.

ಅ.16ರಂದು ಮಂಗಳಾದೇವಿಯ ರಥಬೀದಿಯ ಹಿಂದೂಗಳ ಸ್ಟಾಲ್ ಗಳಿಗೆ ಭಗವಾಧ್ಬಜ ಕಟ್ಟಿದ್ದ ವಿಎಚ್ ಪಿ ಮುಖಂಡ ಶರಣ್, ಹಿಂದೂಗಳ ಸ್ಟಾಲ್ ಗಳಲ್ಲೇ ವ್ಯಾಪಾರ ಮಾಡಿ ಅಂತ ಬಹಿರಂಗ ಕರೆ ಕೊಟ್ಟಿದ್ದರು. ಇಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್

ಭೇಟಿಯಾಗಿದ್ದ ಸಮಾನ ಮನಸ್ಕ ಸಂಘಟನೆಗಳು, ಜಾತ್ರಾ ವ್ಯಾಪಾರಸ್ಥರು, ಬೀದಿ ವ್ಯಾಪಾರಿಗಳು ಹಾಗೂ ಡಿವೈಎಫ್ಐ, ಎಡಪಂಥೀಯ ಸಂಘಟನೆಗಳ ನಿಯೋಗ ಈ ಬಗ್ಗೆ ಅಸಮಾಧಾನ ಹೊರ ಹಾಕಿತ್ತು. 


ಸಚಿವ ದಿನೇಶ್ ಗುಂಡೂರಾವ್ ಎದುರು ಡಿವೈಎಫ್ಐ ಮುಖಂಡ ಮುನೀರ್ ಕಾಟಿಪಳ್ಳ ಅಸಮಾಧಾನ ವ್ಯಕ್ತಪಡಿಸಿದ್ದರು. ಶರಣ್ ಪಂಪ್ ವೆಲ್ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಲು ಆಗ್ರಹಿಸಿದ್ದರು. ಆ ಬಳಿಕ‌ ಸಚಿವ ಗುಂಡೂರಾವ್ ಅವರು ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್ ಕರೆದು ಕಾನೂನು ಕ್ರಮಕ್ಕೆ ಸೂಚಿಸಿದ್ದರು . ಗುಂಡೂರಾವ್ ಸೂಚನೆ ಬೆನ್ನಲ್ಲೇ ಶರಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಶರಣ್ ಪಂಪ್‌ವೆಲ್ ಹಾಗೂ ಇತರರು ಎಂದು ಕೆಲ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

Leave a Comment