ಬೆಂಗಳೂರು: ಲಾಜಿಸ್ಟಿಕ್ ಟೆಕ್ ಪ್ಲಾಟ್‌ಫಾರ್ಮ್ ಬ್ಲ್ಯಾಕ್‌ಬಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಕುಮಾರ್ ಯಬಾಜಿ ಬೆಳ್ಳಂದೂರಿನಲ್ಲಿರುವ ತನ್ನ ಔಟರ್ ರಿಂಗ್ ರೋಡ್ (ORR) ಕಚೇರಿಯನ್ನು ಸ್ಥಳಾಂತರಿಸುವುದಾಗಿ ಘೋಷಿಸಿದೆ. ಅವರು ಹೀಗೆ ಘೋಷಿಸಿದ ಒಂದು ದಿನದ ನಂತರ ಕರ್ನಾಟಕ ಕಾಂಗ್ರೆಸ್ ಸರ್ಕಾರವು ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿಡಲು ವಿಫಲವಾಗಿದೆ ಎಂಬ ತೀವ್ರ ಟೀಕೆಗಳಿಗೆ ಗುರಿಯಾಗಿದೆ.
ಕೆ ಆರ್ ಪುರಂ ನಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ವರೆಗೆ ವಿಸ್ತರಿಸಿರುವ ಬೆಂಗಳೂರಿನ ಟೆಕ್ ಕಾರಿಡಾರ್‌ಗೆ ORR ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಸುಮಾರು 500 ಕಂಪನಿಗಳು 9 ಲಕ್ಷಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿವೆ.
ಮಂಗಳವಾರ ರಾಜೇಶ್ ಅವರು X ನಲ್ಲಿ ORR ನ ದುಃಸ್ಥಿತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಗುಂಡಿಗಳು ಮತ್ತು ಧೂಳಿನಿಂದ ತುಂಬಿದ ಕೆಟ್ಟ ರಸ್ತೆಗಳಲ್ಲಿ ದೀರ್ಘ ಕಾಲದ ಪ್ರಯಾಣವನ್ನು ತಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ತಮ್ಮ ಕಚೇರಿಯನ್ನು ಆ ಪ್ರದೇಶದಿಂದ ಹೊರಗೆ ಸ್ಥಳಾಂತರಿಸುವ ನಿರ್ಧಾರವನ್ನು ಪ್ರಕಟಿಸಿದ್ದರು.
"ORR (ಬೆಳ್ಳಂದೂರು) ಕಳೆದ 9 ವರ್ಷಗಳಿಂದ ನಮ್ಮ ಕಚೇರಿ ಮತ್ತು ಮನೆಯಾಗಿದೆ. ಆದರೆ, ಈಗ ಇಲ್ಲಿ ಮುಂದುವರಿಯುವುದು ತುಂಬಾ ಕಷ್ಟ. ಆದ್ದರಿಂದ ನಾವು ಹೊರಗೆ ಹೋಗಲು ನಿರ್ಧರಿಸಿದ್ದೇವೆ" ಎಂದು ಅವರು ತಮ್ಮ ಎಕ್ಸ್ ಹ್ಯಾಂಡಲ್ ನಲ್ಲಿ ಬರೆದುಕೊಂಡಿದ್ದರು.
ಇದಲ್ಲದೇ, ತಮ್ಮ ಸಹೋದ್ಯೋಗಿಗಳು ಕಚೇರಿಗೆ ತಲುಪಲು ಸರಾಸರಿ ಪ್ರಯಾಣದ ಸಮಯ ಒಂದೂವರೆ ಗಂಟೆಗೂ ಹೆಚ್ಚು ಎಂದು ಅವರು ಬೇಸರದಿಂದ ಹೇಳಿಕೊಂಡಿದ್ದಾರೆ. ರಸ್ತೆಗಳು ಗುಂಡಿಗಳು ಧೂಳಿನಿಂದ ತುಂಬಿವೆ. ಜೊತೆಗೆ ಅವುಗಳನ್ನು ಸರಿಪಡಿಸುವ ಉದ್ದೇಶಗಳೇ ಕಡಿಮೆಯಾದಂತಿದೆ. ಮುಂದಿನ ಐದು ವರ್ಷಗಳಲ್ಲಿ ಇದರಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ ಎಂದು ಅವರು ಬ್ರೋಕನ್ ಹಾರ್ಟ್ ಎಮೋಜಿಯೊಂದಿಗೆ ತಮ್ಮ ಎಕ್ಸ್ ಹ್ಯಾಂಡಲ್ ಪೋಸ್ಟ್ ಕೊನೆಗೊಳಿಸಿದ್ದಾರೆ.
ರಾಜೇಶ್ ಅವರ ಎಕ್ಸ್ ಪೋಸ್ಟ್ ಗೆ ಪ್ರಶಂಸೆಗಳ ಸುರಿಮಳೆ: ಎಲ್ಲಾ ಬೆಂಗಳೂರಿಗರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯನ್ನು ಎತ್ತಿ ತೋರಿಸಿದ್ದಕ್ಕಾಗಿ ರಾಜೇಶ್ ಅವರನ್ನು ನೆಟಿಜನ್‌ಗಳು ಹೊಗಳಿದರೆ, ಕಾರ್ಪೊರೇಟ್ ಉದ್ಯಮಿಗಳು ಐಟಿ ನಗರದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ಬಗ್ಗೆ ರಾಜ್ಯ ಸರ್ಕಾರದ ನಿರಾಸಕ್ತಿ ವಿರುದ್ಧ ಟೀಕಾ ಪ್ರಹಾರವನ್ನೇ ನಡೆಸಿದ್ದಾರೆ.
ಇದು ಬೆಂಗಳೂರು ಆಡಳಿತದ ದೊಡ್ಡ ವೈಫಲ್ಯ ಎಂದ ಮೋಹನ್ ದಾಸ್ ಪೈ: ಇನ್ಫೋಸಿಸ್‌ನ ಮಾಜಿ ಸಿಎಫ್‌ಒ ಮತ್ತು ಆರಿನ್ ಕ್ಯಾಪಿಟಲ್ ಮುಖ್ಯಸ್ಥ ಮೋಹನ್ ದಾಸ್ ಪೈ ಅವರು ಕಳಪೆ ಮೂಲಸೌಕರ್ಯವನ್ನು ಬೆಂಗಳೂರಿನ ಆಡಳಿತದ ದೊಡ್ಡ ವೈಫಲ್ಯ ಎಂದು ಬಣ್ಣಿಸಿದ್ದಾರೆ.
ಇದು ಬೆಂಗಳೂರಿನಲ್ಲಿ ಆಡಳಿತದ ದೊಡ್ಡ ವೈಫಲ್ಯ. ಸಚಿವ
ಡಿ.ಕೆ. ಶಿವಕುಮಾರ್ ದಯವಿಟ್ಟು ನೋಡಿ, ಕಂಪನಿಗಳು ORR ನಿಂದ ಹೊರಬರುತ್ತಿವೆ. ಪರಿಸ್ಥಿತಿ ಆಶಾದಾಯಕವಾಗಿಲ್ಲ. ದಯವಿಟ್ಟು ಮಧ್ಯಪ್ರವೇಶಿಸಿ ಎಂದು ಅವರು ರಾಜೇಶ್ ಅವರ ನಿರ್ಧಾರಕ್ಕೆ ಪ್ರತಿಕ್ರಿಯಿಸಿ ಪೋಸ್ಟ್ ಮಾಡಿದ್ದಾರೆ.
ಡಿಸಿಎಂ ಭರವಸೆಗಳ ಬಳಿಕವೂ ಹಾಗೇ ಉಳಿದ ಗುಂಡಿಗಳು: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ರಸ್ತೆಗಳಲ್ಲಿರುವ ಎಲ್ಲಾ ಗುಂಡಿಗಳನ್ನು 1,100 ರೂ. ವೆಚ್ಚದಲ್ಲಿ ಮುಚ್ಚಲಾಗುವುದು ಎಂದು ಹೇಳಿದ್ದರು. ಅವರು ಎರಡು ತಿಂಗಳ ಗಡುವನ್ನು ಸಹ ನಿಗದಿಪಡಿಸಿದ್ದರು. ಯಾವುದೇ ಗುಂಡಿಗಳು ಕಂಡುಬಂದರೆ ನಾಗರಿಕ ಅಧಿಕಾರಿಗಳಿಗೆ ವರದಿ ಮಾಡಲು ‘ರಸ್ತೆ ಗುಂಡಿ ಗಮನ' ಎಂಬ ಮೊಬೈಲ್ ಅಪ್ಲಿಕೇಶನ್ ಸಹ ಇದೆ. ಆದರೆ, ಒಂದು ವರ್ಷದ ನಂತರವೂ ಬೆಂಗಳೂರು ರಸ್ತೆಗಳಲ್ಲಿ ಗುಂಡಿಗಳು ಅಸ್ತಿತ್ವದಲ್ಲಿದ್ದು, ವಾಹನ ಚಾಲಕರ ಜೀವವನ್ನು ಅಪಾಯಕ್ಕೆ ಸಿಲುಕಿಸುತ್ತಿವೆ. ಹೊಸ ಮೆಟ್ರೋ ಮಾರ್ಗಗಳ ಕಾಮಗಾರಿಗಳು, ರಸ್ತೆಗಳ ವೈಟ್ ಟಾಪಿಂಗ್, ಅನೇಕ ಪ್ರದೇಶಗಳಲ್ಲಿ ಹೊಸ ಒಳಚರಂಡಿ ಮಾರ್ಗಗಳನ್ನು ಹಾಕುವುದು, ಇವುಗಳು ಪೂರ್ಣಗೊಳ್ಳುವ ಗಡುವು ಮೀರಿದ್ದು, ಬೆಂಗಳೂರಿಗರ ಸಂಕಷ್ಟವನ್ನು ಹೆಚ್ಚಿಸಿದೆ.
ಬ್ಲ್ಯಾಕ್ ಬಕ್ ಕಂಪನಿಗೆ ವೈಜಾಗ್ ಗೆ ಆಹ್ವಾನ ನೀಡಿ ಆಂಧ್ರ ಸಚಿವರು: ಏತನ್ಮಧ್ಯೆ ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್, ವಿಶ್ವ ದರ್ಜೆಯ ಸೌಲಭ್ಯಗಳನ್ನು ನೀಡುವ ಭರವಸೆ ಮೂಲಕ ತಮ್ಮ ಕಂಪನಿಯ ಕಚೇರಿಯನ್ನು ವೈಜಾಗ್‌ಗೆ ಸ್ಥಳಾಂತರಿಸಲು ರಾಜೇಶ್ ಅವರನ್ನು ಆಹ್ವಾನಿಸಿದ್ದಾರೆ. ರಾಜೇಶ್ ಅವರ ಎಕ್ಸ್ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ ಲೋಕೇಶ್, ವೈಜಾಗ್ ಭಾರತದ ಅಗ್ರ ಐದು ಸ್ವಚ್ಛ ನಗರಗಳಲ್ಲಿ ಒಂದು ಎಂದು ಹೇಳಿಕೊಂಡು ಅಲ್ಲಿಗೆ ಸ್ಥಳಾಂತರಗೊಳ್ಳಲು ಮುಕ್ತ ಆಹ್ವಾನ ನೀಡಿದ್ದಾರೆ.
"ಹಾಯ್ ರಾಜೇಶ್, ನಿಮ್ಮ ಕಂಪನಿಯನ್ನು ವೈಜಾಗ್‌ಗೆ ಸ್ಥಳಾಂತರಿಸಲು ನಾನು ನಿಮಗೆ ಆಸಕ್ತಿ ನೀಡಬಹುದೇ? ನಾವು ಭಾರತದ ಟಾಪ್ 5 ಸ್ವಚ್ಛ ನಗರಗಳಲ್ಲಿ ಒಂದಾಗಿದ್ದೇವೆ ಮತ್ತು ಅತ್ಯುತ್ತಮ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ. ಮಹಿಳೆಯರಿಗೆ ಸುರಕ್ಷಿತ ನಗರವೆಂದು ರೇಟಿಂಗ್ ಪಡೆದಿದ್ದೇವೆ ಎಂದು ನಾರಾ ಲೋಕೇಶ್ ಅವರು ರಾಜೇಶ್ ಅವರನ್ನು ತಮ್ಮನ್ನು ನೇರವಾಗಿ ಸಂಪರ್ಕಿಸುವಂತೆ ಎಕ್ಸ್ ಪೋಸ್ಟ್ ಮೂಲಕ ಕೇಳಿಕೊಂಡಿದ್ದಾರೆ.















