ಬೆಂಗಳೂರು: ರಾಜ್ಯದ ಪ್ರಮುಖ ಸಾರಿಗೆ ಸಂಸ್ಥೆಯಾದ ಕೆಎಸ್‌ಆರ್‌ಟಿಸಿ ಇದೇ ಮೊದಲ ಬಾರಿಗೆ ಲಾಜಿಸ್ಟಿಕ್ಸ್ ಸೇವೆಯನ್ನು ಡಿಸೆಂಬರ್ 23 ರಿಂದ ಪ್ರಾರಂಭಿಸಲಿದೆ. ಈ ಮೂಲಕ ನಾಡಿನ ಪ್ರಮುಖ ನಗರಗಳಿಗೆ ಕಾರ್ಗೋ ಸೇವೆ ಲಭ್ಯವಾಗಲಿದೆ.
ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಕೆಎಸ್‌ಆರ್‌ಟಿಸಿಗೆ ನೂತನವಾಗಿ ಸೇರ್ಪಡೆಗೊಳಿಸುತ್ತಿರುವ ನಮ್ಮ ಕಾರ್ಗೋ ಪಾರ್ಸೆಲ್ ಮತ್ತು ಕೊರಿಯರ್ ಟ್ರಕ್ ಗಳನ್ನು ಶನಿವಾರ ಬೆಂಗಳೂರಿನ ಕೆ ಎಸ್ ಆರ್ ಟಿ ಸಿ ಕೇಂದ್ರ ಕಚೇರಿಯಲ್ಲಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಮತ್ತು ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಸಾರಿಗೆ ಹಾಗೂ ಮುಜರಾಯಿ ಸಚಿವರು ಡಿಸೆಂಬರ್ 23ಕ್ಕೆಒಟ್ಟು 20 ಟ್ರಕ್ ಗಳಿಗೆ
ಚಾಲನೆ ನೀಡಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು.
ಕೆಎಸ್‌ಆರ್‌ಟಿಸಿ ಈಗಾಗಲೇ ಬಸ್‌ಗಳಲ್ಲಿ ಕಾರ್ಗೋ ಸೇವೆಯನ್ನು ಆರಂಭಿಸಿದೆ. ಆದರೆ ಡೋರ್ ಸ್ಟೆಪ್ ಸೇವೆಯನ್ನು ನೀಡುವ ಉದ್ದೇಶದಿಂದ ಈ ಲಾರಿಗಳನ್ನು ಖರೀಸಲಾಗಿದೆ. ಉತ್ಪಾದನಾ ಘಟಕಗಳಿಂದ ಸರಕುಗಳನ್ನು ಸಾಗಿಸುವವರಿಗೆ ಈ ಸೇವೆ ಅನುಕೂಲವಾಗಿದೆ. ಸದ್ಯ ಬೆಂಗಳೂರು ಮಂಗಳೂರು, ಹುಬ್ಬಳ್ಳಿ ಸೇರಿದಂತೆ ಪ್ರಮುಖ ನಗರಗಳ ನಡುವೆ ಈ ಲಾರಿಗಳು ಸಂಚಾರ ನಡೆಸಲಿದೆ. ಮುಂದಿನ ದಿನಗಳಲ್ಲಿ ಲಾರಿ ಸಂಖ್ಯೆ ಹೆಚ್ಚಿಸಿ ಎಲ್ಲಾ ಊರುಗಳಿಗೂ ಸೇವೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ವರದಿಯಾಗಿದೆ.














