breaking news

Coastal Bulletin

ಬೆಳಗಾವಿ : ಮಳೆಗಾಲದ ಈ ಸಮಯದಲ್ಲಿಯೂ ಸುಡು ಬಿಸಿಲಿನಿಂದ ಜನರು ಕಷ್ಟಪಡುತ್ತಿದ್ದಾರೆ. ಮಳೆ ಬರಲೆಂದು ಪ್ರಾರ್ಥಿಸಿ ಕತ್ತೆ ಮದುವೆ, ಕಪ್ಪೆಗಳ ಮದುವೆ, ಗುರ್ಜಿ ಆಟ, ಸುತ್ತಲಿನ ಪರಿಸರದ ದೇವರಿಗೆ ಹರಿಕೆ ತೀರಿಸುವುದು, ದೇವರ ಹೆಸರಲ್ಲಿ ಜನಪದ ಆಟ, ನೃತ್ಯ ಇತ್ಯಾದಿ ಸಂಪ್ರದಾಯಗಳು ನಡೆಯುತ್ತಾ ಬಂದಿವೆ. ಆದರೆ ಈ ಎಲ್ಲಕ್ಕಿಂತಲೂ ವಿಭಿನ್ನವಾಗಿ ಬೆಳಗಾವಿಯ ಹುಬ್ಬಳ್ಳಿ ಗ್ರಾಮಸ್ಥರು ದೇವರನ್ನೇ ಜಲ ದಿಗ್ಬಂಧನಕ್ಕೆ ಒಳಪಡಿಸಿ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.

ಸರಿಯಾದ ಸಮಯಕ್ಕೆ ಮಳೆ ಬಾರದ್ದರಿಂದ ಹಾಗೂ ಬರಗಾಲದ ಛಾಯೆ ಆವರಿಸಬಾರದು ಎಂಬ ಆತಂಕದಿಂದ ಸೂರ್ಯ ನಾರಾಯಣ ದೇವರಿಗೆ ಜನರು ಪೂಜೆ ಸಲ್ಲಿಸಿದ್ದಾರೆ. ಮಳೆಗಾಗಿ ಪ್ರಾರ್ಥಿಸಿ ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗೆವರೆಗೆ ಭಕ್ತರು ಜಾಗರಣೆ ಮಾಡಿ ಭಜನೆ, ಪಾರ್ಥನೆ ಮಾಡಿದ್ದಾರೆ. ಸೂರ್ಯ ನಾರಾಯಣ ದೇವರ ಮೂರ್ತಿಯ ಸುತ್ತಲೂ ನೀರು ಹಾಕಿದ್ದಾರೆ. ಗುರುವಾರ ಬೆಳಗ್ಗೆ ಮಲಪ್ರಭಾ ನದಿಯಿಂದ ಮಡಿಯಲ್ಲಿ ತಂದ ನೀರಿಂದ ಸೂರ್ಯ ನಾರಾಯಣ ದೇವಸ್ಥಾನದ ಗರ್ಭಗುಡು ತುಂಬಿಸಿರುವ

ಭಕ್ತರು, ಮಳೆಗಾಗಿ ಪ್ರಾರ್ಥಿಸಿ ದೇವಸ್ಥಾನದ ಬಾಗಿಲು ಮುಚ್ಚಿದ್ದಾರೆ. ಮಳೆ ಆಗುವವರೆಗೆ ಗರ್ಭ ಗುಡಿಯ ಬಾಗಿಲು ತೆರೆಯದಿರಲು ನಿರ್ಧರಿಸಿದ್ದಾರೆ.

ಈ ಪದ್ಧತಿಯು ಪೂರ್ವಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಹಿರಿಯರು, ಹಿಂದೆ ಮಳೆಯಾಗದಿದ್ದಾಗ ಸಾಕಷ್ಟು ಬಾರಿ ಮಳೆಗಾಗಿ ಪ್ರಾರ್ಥಿಸಿ ಹೀಗೆ ದೇವಸ್ಥಾನದ ಗರ್ಭಗುಡಿಯಲ್ಲಿ ನೀರು ತುಂಬಸಿ, ಬಾಗಿಲು ಮುಚ್ಚುತ್ತಿದ್ದರು. ಪ್ರತಿ ಬಾರಿ ಪೂಜೆ ಸಲ್ಲಿಸಿದಾಗಲೂ ಮಳೆ ಬಂದಿದೆ. ದೇವರು ಈಗಲೂ ಉತ್ತಮ ಮಳೆ ಸುರಿಸಿ ರೈತರನ್ನು ಕಾಪಾಡುತ್ತಾನೆ ಎಂಬುದು ಗ್ರಾಮಸ್ಥರ ನಂಬಿಕೆ.

Leave a Comment