ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರ ಈ ಬಾರಿ ಆಡಳಿತಾರೂಢ ಬಿಜೆಪಿಗೆ ಕಬ್ಬಿಣದ ಕಡಲೆಯಾಗಿದೆ. ಬಿಜೆಪಿಯಿಂದ ಟಿಕೆಟ್ ವಂಚಿತರಾಗಿರುವ ಹಿಂದೂಪರ ಮುಖಂಡ ಅರುಣ್ ಪುತ್ತಿಲ ಪಕ್ಷೇತರರಾಗಿ ಕಣಕ್ಕಿಳಿದಿರುವುದು. ಪುತ್ತಿಲರವರಿಗೆ ಕ್ಷೇತ್ರದಲ್ಲಿ ಅಭೂತಪೂರ್ವ ಜನಬೆಂಬಲ ಸಿಕ್ಕಿದ್ದು ಕಮಲ vs ಹಿಂದುತ್ವ ನಡುವಿನ ಚುನಾವಣೆ ಎಂದು ಬಿಂಬಿತವಾಗಿದೆ.
ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಮತ್ತೆ ಟಿಕೆಟ್ ನೀಡುವುದಕ್ಕೆ ಕಾರ್ಯಕರ್ತರ ವಲಯದಿಂದ ಭಾರೀ ವಿರೋಧವಿತ್ತು ಹಾಗೂ ಇತ್ತೀಚೆಗೆ ಅವರು ಕಾರ್ಯಕರ್ತರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದು ಕೂಡ ಭಾರೀ ಚರ್ಚೆಯಾಗಿತ್ತು.
ಕಳೆದ ಬಾರಿಯೂ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದೂಪರ ಮುಖಂಡ ಅರುಣ ಪುತ್ತಿಲರಿಗೆ ಈ ಬಾರಿಯೂ ಬಿಜೆಪಿ ಹೈಕಮಾಂಡ್ ಅವರ ಹೆಸರನ್ನು ಗಣನೆಗೆ ತೆಗೆದುಕೊಳ್ಳದೆ ಅಂತಿಮವಾಗಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯೆ ಆಶಾ ತಿಮ್ಮಪ್ಪ ಗೌಡ ಅವರಿಗೆ ಟಿಕೆಟ್ ಘೋಷಣೆ ಮಾಡಿತು.ಟಿಕೆಟ್ ನಿರೀಕ್ಷೆಯಿಲ್ಲದ ಆಶಾ ತಿಮ್ಮಪ್ಪರವರಿಗೆ
ಇದು ಅಚ್ಚರಿಯೂ ಆಗಿತ್ತು.
ಪುತ್ತಿಲರವರು ಇಂದು ನಾಮಪತ್ರ ಸಲ್ಲಿಸಿದ್ದು ದಾರಿಯುದ್ದಕ್ಕೂ ಬೃಹತ್ ಸಂಖ್ಯೆಯಲ್ಲಿ ಹಿಂದೂ ಕಾರ್ಯಕರ್ತರು ಬೆಂಬಲ ಸೂಚಿಸಿದ್ದು ತಮ್ಮ ಸಾಮರ್ಥ್ಯವನ್ನು ವಿರೋಧಿಗಳಿಗೆ ರವಾನಿಸಿದ್ದಾರೆ.
ಅರುಣ್ ಪುತ್ತಿಲ ಅವರ ಸ್ಪರ್ಧೆ ಬಿಜೆಪಿಗೆ ಹೊಡೆತ ಕೊಟ್ಟಷ್ಟು ಅದರ ಪರೋಕ್ಷ ಲಾಭವಾಗುವುದು ಕಾಂಗ್ರೆಸ್ ಗೆ. ಒಂದು ವೇಳೆ ಪುತ್ತಿಲ ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಕ್ಲೀನ್ ಸ್ವೀಪ್ ಮಾಡಿದಲ್ಲಿ ಅವರೇ ಗೆದ್ದರೂ ಆಶ್ಚರ್ಯವಿಲ್ಲ. ಅದಲ್ಲದೆ ಕೇವಲ ವೋಟ್ ವಿಭಜನೆ ಆದರೆ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ಇದ್ದೇ ಇದೆ.
















