ಬೆಂಗಳೂರು : ಪಠ್ಯ ಪುಸ್ತಕ ಪರಿಷ್ಕರಣೆ ಹಾಗೂ ಮತಾಂತರ ನಿಷೇಧ ಕಾಯಿದೆಗೆ ತಿದ್ದುಪಡಿ ತರಲು ಸರಕಾರ ನಿರ್ಧಾರಿಸಿದೆ ಎಂದು ಸಚಿವ ಎಚ್ಕೆ ಪಾಟೀಲ್ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ನಾನಾ ರೀತಿಯ ಕಾಯ್ದೆಗಳನ್ನು ಜಾರಿಗೊಳಿಸುವುದು ಮಾತ್ರವಲ್ಲದೆ, ಅಧಿಕಾರಕ್ಕೆ ಬರುವ ಮೊದಲು ಬಿಜೆಪಿ ಸರ್ಕಾರವು ಪರಿಷ್ಕರಿಸಿದ್ದ ಪಠ್ಯಪುಸ್ತಕಗಳ ವಿಷಯವನ್ನು ಕೈಬಿಡಲಾಗುವುದು ಎಂದು ಹೇಳಿತ್ತು. ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯಲ್ಲಿ ಸೇರಿಸಿದ್ದ ಅಂಶಗಳನ್ನು ಕೈಬಿಟ್ಟು ಮತಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲು ಮತ್ತು ಪಠ್ಯ ಪುಸ್ತಕ ಪರಿಷ್ಕರಣೆಗೆ ಗುರುವಾರ ನಡೆದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ವೇಳೆ
ಪರಿಷ್ಕೃತಗೊಂಡ ಪಠ್ಯದಲ್ಲಿ ಸೇರ್ಪಡೆ ಮಾಡಲಾದ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಗಡೆವಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ವಿದ್ವಾಂಸರಾದ ಬನ್ನಂಜೆ ಗೋವಿದಾಚಾರ್ಯ ಅವರ ವಿಚಾರದ ಪಠ್ಯವನ್ನು ಸೇರಿದಂತೆ ಹಲವು ಪಠ್ಯಗಳನ್ನು ಪರಿಷ್ಕರಣೆ ಮಾಡಲು ಸರ್ಕಾರ ನಿರ್ಧರಿಸಿದೆ.
ರಾಷ್ಟ್ರಗೀತೆ ಹಾಡುವ ಸ್ಥಳಗಳಲ್ಲಿ ಸಂವಿಧಾನದ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಲಾಗುವುದು ಹಾಗೂ ಜುಲೈ ಯಲ್ಲಿ ನಡೆಯುವ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡನೆ ಆಗಲಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಎಚ್ಕೆ ಪಾಟೀಲ್ ಹೇಳಿದ್ದಾರೆ.















