ಬೆಂಗಳೂರು: ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಸಂಕಷ್ಟವೊಂದು ಎದುರಾಗಿದೆ. ಅವರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, 17 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಸಂತ್ರಸ್ತೆಯ ತಾಯಿ ನೀಡಿದ ದೂರಿನ ಅನ್ವಯ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ಪೊಲೀಸರು ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಫೋಕ್ಸೋ ಕಾಯ್ದೆ ಸೆಕ್ಷನ್ 8, ಮತ್ತು ಐಪಿಸಿ ಸೆಕ್ಷನ್ 354(a) ಅಡಿ ಪ್ರಕರಣ ದಾಖಲಾಗಿದೆ.
ಗುರುವಾರ ರಾತ್ರಿ ಪೊಲೀಸ್ ಠಾಣೆಗೆ ತೆರಳಿದ ಸಂತ್ರಸ್ತ ಬಾಲಕಿಯ ತಾಯಿ ಬಿಎಸ್ವೈ ವಿರುದ್ಧ ದೂರು ನೀಡಿದ್ದಾರೆ. ಇನ್ನು ಸಂತ್ರಸ್ತೆ ನೀಡಿರುವ ದೂರಿನಲ್ಲಿ ಫೆಬ್ರವರಿ 2ರಂದು ಅಪ್ರಾಪ್ತ
ಮಗಳ ಮೇಲೆ ಅತ್ಯಾಚಾರವಾಗಿದೆ ಎಂದು ನ್ಯಾಯ ಕೇಳಲು ಡಾಲರ್ಸ್ ಕಾಲೋನಿಯಲ್ಲಿರೋ ಬಿಎಸ್ ವೈ ನಿವಾಸಕ್ಕೆ ಹೋದಾಗ ಕಿರುಕುಳ ನೀಡಿರುವುದಾಗಿ ಆರೋಪಿಸಲಾಗಿದೆ.
ತಾಯಿಯು ತನ್ನ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವಾಗಿದೆ ಎಸ್ ಐಟಿ ರಚನೆ ಮಾಡಿ ಎಂದು ಮನವಿ ಕೊಡಲು ಹೋಗಿದ್ದ ವೇಳೆ ಮಗಳಿಗೆ ಸಾಂತ್ವನ ಹೇಳುವ ನೆಪದಲ್ಲಿ ಮನೆಯ ಕೋಣೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದು, ಇದನ್ನು ತಾಯಿ ಪ್ರಶ್ನಿಸಿದಾಗ ಕ್ಷಮೆ ಕೇಳಿರುವುದಾಗಿಯೂ ಆರೋಪಿಸಿದ್ದಾರೆ.









