ಬೆಂಗಳೂರು : ಕಾಶ್ಮೀರ ಪಂಡಿತರ ಕುರಿತಾದ ನೈಜ ಘಟನೆಗಳಾಧಾರಿತ ಬಾಲಿವುಡ್ ಚಿತ್ರ 'ಕಾಶ್ಮೀರ ಫೈಲ್ಸ್' ಚಿತ್ರದ ವೀಕ್ಷಣೆಗೆ ಮಂಗಳವಾರ ಸಂಜೆ 6.45 ಕ್ಕೆ ಮಂತ್ರಿ ಮಾಲ್ ನಲ್ಲಿ ವಿಧಾನಸಭಾಧ್ಯಕ್ಷ ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ವ್ಯವಸ್ಥೆ ಮಾಡಿದ್ದಾರೆ. ಜೊತೆಗೆ ಈ ಸಿನಿಮಾಗೆ ಕರ್ನಾಟಕ ರಾಜ್ಯ ಸರ್ಕಾರ ತೆರಿಗೆ ರಿಯಾಯಿತಿಯನ್ನು ಘೋಷಣೆ ಮಾಡಿದೆ.
ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಮಾರ್ಚ್ 11 ರಂದು ಬಿಡುಗಡೆಯಾಗಿದೆ. ಇದು 1990ರ ಸಮಯದಲ್ಲಿ ಕಾಶ್ಮೀರದಲ್ಲಿನ ಭಯೋತ್ಪಾದಕರ ಹಿಂಸೆಗೆ ನಲುಗಿ ಪ್ರಾಣ ಕಳೆದುಕೊಂಡ ಒಂದು ಕುಟುಂಬದ ಕಥೆಯಾಗಿದೆ.
ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯ ಮತ್ತು ಅವರ ನಿರಾಶ್ರಿತರಾಗಿ ಅನುಭವಿಸಿದ ಸಂಕಷ್ಟವನ್ನು ಚಿತ್ರದಲ್ಲಿ ತೋರಿಸಿದಲ್ಲದೆ, ಭಯೋತ್ಪಾದಕರು ಕಾಶ್ಮೀರಿ ಪಂಡಿತರನ್ನು ತಮ್ಮ ಸ್ವಂತ ಮನೆಗಳನ್ನು ತೊರೆದು ಓಡಿಹೋಗುವಂತೆ ಹೇಗೆ ಒತ್ತಾಯಿಸಿದರು ಎಂಬುದನ್ನು ಚಿತ್ರದಲ್ಲಿ ಎಳೆಎಳೆಯಾಗಿ ಬಿಡಿಸಲಾಗಿದೆ.
ಈಗಾಗಲೇ ‘ದಿ ಕಾಶ್ಮೀರ್ ಫೈಲ್ಸ್’ ಅನ್ನು ಹರಿಯಾಣ, ಗುಜರಾತ್ ಮತ್ತು ಮಧ್ಯಪ್ರದೇಶ ಸರ್ಕಾರಗಳು ತಮ್ಮ ತಮ್ಮ ರಾಜ್ಯಗಳಲ್ಲಿ ತೆರಿಗೆ ಮುಕ್ತಗೊಳಿಸಿದೆ.
ಈ ಸಾಲಿಗೆ ಕರ್ನಾಟಕವೂ ಸೇರ್ಪಡೆಯಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ತೆರಿಗೆ ಮುಕ್ತ ಮಾಡಿರುವುದಾಗಿ ಘೋಷಣೆ ಮಾಡಿದ್ದಾರೆ. ಮಧ್ಯಪ್ರದೇಶದಲ್ಲಿ ಗೃಹ ಸಚಿವರು ಈ ಚಿತ್ರದ ವೀಕ್ಷಣೆಗಾಗಿ ಪೋಲಿಸರಿಗೆ ಒಂದು ದಿನ ಅಧಿಕೃತ ರಜೆ ನೀಡಲು ಮುಂದಾಗಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಚಿತ್ರದಲ್ಲಿ ಅನುಪಮ್ ಖೇರ್ ಮತ್ತು ಮಿಥುನ್ ಚಕ್ರವರ್ತಿ ಸೇರಿದಂತೆ ಅನೇಕ ಹಿರಿಯರು ನಟಿಸಿದ್ದಾರೆ. ಇದಲ್ಲದೆ, ಚಿತ್ರದಲ್ಲಿ ಪಲ್ಲವಿ ಜೋಶಿ, ದರ್ಶನ್ ಕುಮಾರ್, ಚಿನ್ಮಯ್ ಮಾಂಡ್ಲೇಕರ್, ಪುನೀತ್ ಇಸ್ಸಾರ್, ಭಾಷಾ ಸುಂಬಳಿ ಮುಂತಾದ ನಟರಿದ್ದಾರೆ. ದಿ ಕಾಶ್ಮೀರ್ ಫೈಲ್ಸ್‌ನಲ್ಲಿ ಅನುಪಮ್ ಖೇರ್ ಅವರ ಅಭಿನಯವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.














