ಕುಣಿಗಲ್ : ತಾಲೂಕಿನ ಬಿದನಗೆರೆ ಬಸವೇಶ್ವರ ಮಠದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ವಿಶ್ವ ವಿಖ್ಯಾತ 161 ಅಡಿ ಎತ್ತರದ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ವಿಡಿಯೋ ಮೂಲಕ ಏ 10 ಭಾನುವಾರ ಶ್ರೀರಾಮ ನವಮಿಯಂದು ಲೋಕಾರ್ಪಣೆ ಮಾಡಲಿದ್ದಾರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಶ್ರೀ ಕ್ಷೇತ್ರದ ಪೀಠಾಧಿಕಾರಿ ಡಾ.ಧನಂಜಯ ಗುರೂಜಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗುರೂಜಿ ಮಾತನಾಡಿ, ಪಂಚಮುಖಿ ಆಂಜನೇಯಸ್ವಾಮಿ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಭಾಗವಹಿಸುಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ನವ ದೆಹಲಿಯ ಸಂಸತ್ ಭವನದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು. ಆ ಮನವಿಗೆ ಸಕಾರಾತ್ಮಕವಾಗಿ ಸ್ಪಂಧಿಸಿದ ಪ್ರಧಾನ ಮಂತ್ರಿಗಳು ಶ್ರೀ ಕ್ಷೇತ್ರದಲ್ಲಿ ನಿರ್ಮಾಣಗೊಂಡಿರುವ ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿಯ ಕೆತ್ತನೆ ಅದ್ಬುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ, ಶ್ರೀ ರಾಮ ನವಮಿ ದಿನದಂದು ಪಂಚಮುಖಿ ಆಂಜನೇಯಸ್ವಾಮಿ ಮೂರ್ತಿ ಲೋಕಾರ್ಪಣೆಗೊಳ್ಳುತ್ತಿರುವುದು ಹಿಂದೂಗಳಿಗೆ ವಿಶೇಷವಾದ ದಿನವಾಗಿದೆ ಎಂದರು.
ಕಾರ್ಯಕ್ರಮಕ್ಕೆ ಬರಲು ನನಗೆ ಸಂತಸವಾಗಿದ್ದರೂ , ಕಾರ್ಯನಿಮಿತ್ತ ಬರಲು ಸಾಧ್ಯವಾಗದ ಕಾರಣ, ವರ್ಚುವಲ್ ವಿಡಿಯೋ ಮೂಲಕ ವಿಗ್ರಹವನ್ನು ಲೋಕಾರ್ಪಣೆ ಮಾಡುತ್ತೇನೆ ಎಂದು ತಿಳಿಸಿ, ಮತ್ತೊಮ್ಮೆ ಕ್ಷೇತ್ರಕ್ಕೆ ಭೇಟಿ ನೀಡುವೆ ಎಂದು ಪ್ರಧಾನಿ
ನರೇಂದ್ರ ಮೋದಿ ಅವರು ಭರವಸೆ ನೀಡಿದ್ದಾರೆ ಎಂದು ಗುರೂಜಿ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ, ಶಿರಾ ಪಟ್ಟನಾಯಕನಹಳ್ಳಿ ಸ್ಪಟಿಕಪುರಿ ಮಠದ ನಂಜಾವಧೂತ ಸ್ವಾಮೀಜಿ, ಹರಿಹರ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ, ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್‌ಜೋಶಿ, ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಸಚಿವ ಡಾ.ಸಿ.ಎನ್. ಅಶ್ವಥ್‌ನಾರಾಯಣ್, ಸಂಸದರಾದ ಡಿ.ಕೆ.ಸುರೇಶ್, ಮುನಿಸ್ವಾಮಿ, ಶಾಸಕರಾದ ಡಾ.ಹೆಚ್.ಡಿ.ರಂಗನಾಥ್, ರಾಜುಗೌಡ, ಮಾಜಿ ಸಚಿವ ಡಿ.ನಾಗರಾಜಯ್ಯ, ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷೆ ತಾರಾ ಅನುರಾಧಾ, ಪಿಕಾರ್ಡ್ ಬ್ಯಾಂಕ್ ರಾಜ್ಯಾಧ್ಯಕ್ಷ ಡಿ.ಕೃಷ್ಣಕುಮಾರ್, ಬಿಜೆಪಿ ಮುಖಂಡ ಹೆಚ್.ಡಿ.ರಾಜೇಶ್‌ಗೌಡ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.















