ಬೆಂಗಳೂರಿನ ಎಲ್ಲಾ ವಾಣಿಜ್ಯ ಮಳಿಗೆಗಳಿಗೆ ಕನ್ನಡ ನಾಮ ಫಲಕ ಕಡ್ಡಾಯಗೊಳಿಸಿದ ಬಿಬಿಎಂಪಿ, ತಪ್ಪಿದ್ದಲ್ಲಿ ಲೈಸೆನ್ಸ್ ರದ್ದು.

Coastal Bulletin
ಬೆಂಗಳೂರಿನ ಎಲ್ಲಾ ವಾಣಿಜ್ಯ ಮಳಿಗೆಗಳಿಗೆ ಕನ್ನಡ ನಾಮ ಫಲಕ ಕಡ್ಡಾಯಗೊಳಿಸಿದ ಬಿಬಿಎಂಪಿ, ತಪ್ಪಿದ್ದಲ್ಲಿ ಲೈಸೆನ್ಸ್ ರದ್ದು.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲಾ ವಾಣಿಜ್ಯ ಮಳಿಗೆಗಳು (ಶಾಪಿಂಗ್ ಮಾಲ್, ಅಂಗಡಿ ಮುಂಗಟ್ಟು, ಕಾರ್ಖಾನೆ, ಆಸ್ಪತ್ರೆ ಇನ್ನಿತರ ವ್ಯವಹಾರಿಕ ಕಟ್ಟಡ) ಶೇ.60ರಷ್ಟು ದೊಡ್ದದಾಗಿ ಕನ್ನಡ ಭಾಷೆ ಇರುವಂತೆ ನಾಮಫಲಕ ಅಳವಡಿಕೆ ಮಾಡಬೇಕು. ಇಲ್ಲದಿದ್ದರೆ ಬಿಬಿಎಂಪಿ ವತಿಯಿಂದ ಪಡೆದ ಪರವಾನಗಿಯನ್ನು ರದ್ದು ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್‌ ಖಡಕ್‌ ಸೂಚನೆ ನೀಡಿದ್ದಾರೆ. ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆಯ 8 ವಲಯಗಳ ಆಯುಕ್ತರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಬಳಸದೇ ಇರುವವರಿಗೆ ತಿಳುವಳಿಕೆ ಪತ್ರ ನೀಡಿ ಕೂಡಲೆ ಅನುಷ್ಠಾನಗೊಳಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಲಯ ಆಯುಕ್ತರಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ನಗರದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಬರುವ ವಾಣಿಜ್ಯ ಮಳಿಗೆಗಳು, ಅಂಗಡಿ ಮುಂಗಟ್ಟುಗಳು ಹಾಗೂ ಎಲ್ಲಾ ವಲಯದ ಉದ್ದಿಮೆಗಳನ್ನು ಜನವರಿ 15ರ ಒಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಿ ಕನ್ನಡ ಭಾಷೆಯ ನಾಮಫಲಕ ಅಳವಡಿಸುವಂತೆ ತಿಳುವಳಿಕೆ ಪತ್ರ ನೀಡಬೇಕೆಂದು ಸೂಚಿಸಿದರು.



ಇನ್ನು ಸಮೀಕ್ಷೆ ನಡೆಸುವಾಗ ನಾಮಪಲಕದಲ್ಲಿ ಕನ್ನಡ ಬಳಕೆ

ಮಾಡದಿದ್ದಲ್ಲಿ ಆಯಾ ಉದ್ದಿಮೆಗಳಿಗೆ ತಿಳುವಳಿಕೆ ಪತ್ರ ನೀಡಬೇಕು. ಉದ್ದಿಮೆ ಪರವಾನಗಿ ಇದ್ದರೆ ಯಾಕ ನಾವು ಉದ್ದಿಮೆ ಪರವಾನಗಿ ರದ್ದು ಮಾಡಬಾರದು ಎಂದು ನೋಟಿಸ್ ನೀಡಬೇಕು. ಒಂದು ವೇಳೆ ಉದ್ದಿಮೆ ಪರವಾನಗಿ ಮಾಡಿಸದ್ದಿದರೆ ಯಾಕೆ ನಾವು ನಿಮ್ಮ ಉದ್ದಿಮೆಯನ್ನು ಮುಚ್ಚಬಾರದೆಂದು ತಿಳುವಳಿಕೆ ಪತ್ರವನ್ನು  ಜಾರಿಮಾಡಬೇಕು. ನಗರದಲ್ಲಿ ಎಲ್ಲಾ ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಬಳಸಬೇಕು. ಆಯಾ ವಲಯ ವ್ಯಾಪ್ತಿಯಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಕನ್ನಡ ಭಾಷೆಯನ್ನು ಬಳಸದ ಉದ್ದಿಮೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.

Leave a Comment