ಬೆಂಗಳೂರು: ನಾಡಿನ ಲಕ್ಷ್ಮಿಯರಿಗೆ "ಗೃಹಲಕ್ಷ್ಮಿ ಗ್ಯಾರಂಟಿ" ಕೊನೆಗೂ ಒಲಿದಿದೆ. ಬಾಕಿ ಉಳಿದಿದ್ದ ನಾಲ್ಕು ತಿಂಗಳ ಪೈಕಿ 2 ತಿಂಗಳ ಹಣವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಿದೆ.
ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಡಿ ಮಹಿಳೆಯರಿಗೆ ಫೆಬ್ರವರಿ ತಿಂಗಳೂ ಸೇರಿದಂತೆ ಒಟ್ಟು 4 ತಿಂಗಳ ಹಣವನ್ನು ರಾಜ್ಯ ಸರಕಾರ ಪಾವತಿಸುವುದು ಬಾಕಿ ಉಳಿದಿತ್ತು. ಕಳೆದ ನವೆಂಬರ್ನಿಂದ ಪ್ರತಿ ತಿಂಗಳು ಖಾತೆಗೆ ಯೋಜನೆಯ ಹಣ ಪಾವತಿಯಾಗಿರಲಿಲ್ಲ. ಗೃಹಲಕ್ಷ್ಮಿ ಗ್ಯಾರಂಟಿ ಹಣವನ್ನು ಪಾವತಿ ಮಾಡದೇ ರಾಜ್ಯ ಸರಕಾರ ಬಾಕಿ ಉಳಿಸಿಕೊಂಡ ಬಗ್ಗೆ ಹಲವಾರು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರಿಂದ ಹಾಗೂ ಪ್ರತಿ ಪಕ್ಷ ಬಿಜೆಪಿಯು ರಾಜ್ಯ ಸರಕಾರದ ಖಜಾನೆಯಲ್ಲಿ ಹಣವಿಲ್ಲ, ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟಿದೆ ಎಂದು ಕಟುವಾಗಿ ಟೀಕೆ ಮಾಡಿತ್ತು. ಇದರಿಂದ ಒತ್ತಡಕ್ಕೆ ಸಿಲುಕಿದ ರಾಜ್ಯ ಸರಕಾರ ಈಗ ಹಂತ ಹಂತವಾಗಿ ಗ್ಯಾರಂಟಿ ಯೋಜನೆಯ ಹಣ ಬಿಡುಗಡೆ ಮಾಡಲು ಮುಂದಾಗಿದೆ.
ರಾಜ್ಯ ಸರಕಾರವು ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಬಾಕಿ ಉಳಿದಿರುವ ನಾಲ್ಕು ತಿಂಗಳ ಪೈಕಿ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಹಣವನ್ನು ಕಳೆದ ವಾರ ಪಾವತಿ ಮಾಡಿದೆ. ಎರಡು ತಿಂಗಳಿನಿಂದ 1.26 ಕೋಟಿ ಮಹಿಳೆಯರಿಗೆ ಅಂದಾಜು 5000 ಕೋಟಿ ರೂಪಾಯಿ ಹಣ ಪಾವತಿ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ ಹಣಕಾಸಿನ ಉಸ್ತುವಾರಿ ನೋಡಿಕೊಳ್ಳುವ ಅಧಿಕಾರಿ ತಿಳಿಸಿದ್ದಾರೆ.
ಪ್ರತಿ ತಿಂಗಳು ಒಂದು ಕುಟುಂಬದ ಯಜಮಾನಿಗೆ ಎರಡು ಸಾವಿರ ರೂ ಪಾವತಿಸುವ "ಗೃಹಲಕ್ಷ್ಮಿ ಗ್ಯಾರಂಟಿ" ಯೋಜನೆಗೆ ಹಣ ಹೊಂದಿಸಲು
ರಾಜ್ಯ ಸರಕಾರ ಹರಸಾಹಸ ಪಡುತ್ತಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಪಾವತಿಯೊಂದಿಗೆ 2024ರ ಎಲ್ಲಾ ತಿಂಗಳ ಹಣ ಮಹಿಳೆಯರಿಗೆ ನೀಡಲಾಗಿದೆ. 2025ರ ಜನವರಿ ಮತ್ತು ಫೆಬ್ರವರಿ ತಿಂಗಳ ಹಣ ಬಾಕಿ ಉಳಿದಿದ್ದು ಮಾರ್ಚ್ ಅಥವಾ ಏಪ್ರಿಲ್ನಲ್ಲಿ ಈ ಎರಡು ತಿಂಗಳ ಹಣ ನೀಡುವ ಸಾಧ್ಯತೆಗಳಿವೆ.
ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯು ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿಯೇ ಅತ್ಯಂತ ದುಬಾರಿ ವೆಚ್ಚದ ಗ್ಯಾರಂಟಿ ಯೋಜನೆಯಾಗಿದೆ. ಈ ಯೋಜನೆಗೆ ಬಜೆಟ್ನಲ್ಲಿ 28,800 ಕೋಟಿ ರೂಪಾಯಿ ಹಣವನ್ನು ಮೀಸಲಿಡಲಾಗಿದೆ. ಬಜೆಟ್ನಲ್ಲಿ ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಗಾಗಿಯೇ ಪ್ರತ್ಯೇಕ ಹಣ ಮೀಸಲಿಟ್ಟಿದ್ದರೂ ಪ್ರತಿ ತಿಂಗಳು ಯೋಜನೆಯ ಫಲಾನುಭವಿಗಳಿಗೆ ಸಕಾಲಕ್ಕೆ ಸರಿಯಾಗಿ ಹಣ ಪಾವತಿ ಮಾಡಲು ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಪ್ರಯಾಸ ಪಡುತ್ತಿದೆ. ಪ್ರತಿ ತಿಂಗಳು ಖಜಾನೆಯಿಂದ 1 ಕೋಟಿ 26 ಲಕ್ಷ ಮಹಿಳೆಯರಿಗೆ 2000 ರೂಪಾಯಿ ಹಣ ಹೊಂದಿಸಿ ಪಾವತಿ ಮಾಡುವುದು ಸವಾಲಿನ ಕೆಲಸವಾಗಿದೆ.
ರಾಜ್ಯ ಸರಕಾರವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 33 ಸಾವಿರ ಕೋಟಿ ಅನುದಾನವನ್ನು ಬಜೆಟ್ನಲ್ಲಿ ಘೋಷಣೆ ಮಾಡಿದೆ. ಇದರಲ್ಲಿ 28,800 ಕೋಟಿ ರೂಪಾಯಿ ಗೃಹ ಲಕ್ಷ್ಮಿ ಗ್ಯಾರಂಟಿ ಯೋಜನೆಗಾಗಿಯೇ ವೆಚ್ಚವಾಗುತ್ತಿದೆ. ಗೃಹ ಲಕ್ಷ್ಮಿಯೂ ಸೇರಿದಂತೆ ಐದು ಗ್ಯಾರಂಟಿ ಯೋಜನೆಗಳಿಗೆ ರಾಜ್ಯ ಸರಕಾರ ಬಜೆಟ್ನಲ್ಲಿ ಒಟ್ಟು 52 ಸಾವಿರ ಕೋಟಿ ರೂಪಾಯಿ ಅನುದಾನ ನಿಗದಿಪಡಿಸಿದೆ.














