breaking news

ಭಾರತ - ದ.ಆಫ್ರಿಕಾ ಟಿ20 ಸರಣಿ: ಶತಕ ಮೂಲಕ ಸರಣಿ ಸಮಗೊಳಿಸಿ,ಕಿಂಗ್ ಕೊಹ್ಲಿ ದಾಖಲೆ ಮುರಿದ ನಾಯಕ ಸೂರ್ಯ ಕುಮಾರ್ ಯಾದವ್!

Coastal Bulletin
ಭಾರತ - ದ.ಆಫ್ರಿಕಾ ಟಿ20 ಸರಣಿ: ಶತಕ ಮೂಲಕ ಸರಣಿ ಸಮಗೊಳಿಸಿ,ಕಿಂಗ್ ಕೊಹ್ಲಿ ದಾಖಲೆ ಮುರಿದ ನಾಯಕ ಸೂರ್ಯ ಕುಮಾರ್ ಯಾದವ್!

ಗುರುವಾರ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಸೂರ್ಯಕುಮಾರ್ ಯಾದವ್ 55 ಎಸೆತಗಳಲ್ಲಿ 8 ಸಿಕ್ಸರ್‌ಗಳು ಮತ್ತು 7 ಬೌಂಡರಿ ಸಹಿತ ಅಮೋಘ ಶತಕ ಸಿಡಿಸುವ ಮೂಲಕ ಹಲವು ದಾಖಲೆಗಳನ್ನು ಬರೆದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಸೂರ್ಯ 4ನೇ ಶತಕ ಬಾರಿಸಿದರು.

ವಿಶ್ವದಲ್ಲಿ ಅತಿ ಹೆಚ್ಚು ಅಂತರಾಷ್ಟ್ರೀಯ ಟಿ20 ಶತಕಗಳನ್ನು ಗಳಿಸಿದ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದಾಖಲೆಯನ್ನು ಸೂರ್ಯಕುಮಾರ್ ಯಾದವ್ ಸರಿಗಟ್ಟಿದರು. ರೋಹಿತ್ ಶರ್ಮಾ ಮತ್ತು ಮ್ಯಾಕ್ಸ್‌ವೆಲ್ ಮಾತ್ರ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಶತಕ ಸಿಡಿಸಿದ್ದರು, ಸೂರ್ಯಕುಮಾರ್ ಯಾದವ್ ಕೂಡ ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ.

ದಕ್ಷಿಣ ಆಫ್ರಿಕಾದ ಗ್ಕೆಬರ್ಹಾದಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಸೂರ್ಯಕುಮಾರ್ ಯಾದವ್ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಮೊದಲ ಸ್ಥಾನ ಕಾಪಾಡಿಕೊಂಡಿದ್ದಾರೆ.

ಟಿ20 ಕ್ರಿಕೆಟ್‌ ಇತಿಹಾಸದಲ್ಲಿ 3 ಮತ್ತು ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಬ್ಯಾಟರ್ 4ನೇ ಶತಕ ಗಳಿಸಿರುವುದು ಇದೇ ಮೊದಲ ಬಾರಿಗೆ. ಮ್ಯಾಕ್ಸ್‌ವೆಲ್ ಮಾತ್ರ 3ನೇ ಕ್ರಮಾಂಕಿಂತ ಕೆಳಗೆ ಬ್ಯಾಟಿಂಗ್ ಮಾಡುವಾಗ 3 ಶತಕ ಸಿಡಿಸಿದ್ದಾರೆ. ಮ್ಯಾಕ್ಸ್‌ವೆಲ್ ದಾಖಲೆ ಮುರಿದಿರುವ ಸೂರ್ಯ ನಾಲ್ಕನೇ ಶತಕ ಸಿಡಿಸಿ ಮಿಂಚಿದರು.

ಸಿಕ್ಸರ್ ಬಾರಿಸುವ ವಿಚಾರದಲ್ಲಿ ಸೂರ್ಯಕುಮಾರ್ ಯಾದವ್ ವಿರಾಟ್ ಕೊಹ್ಲಿ ದಾಖಲೆ ಮುರಿದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ 107 ಇನ್ನಿಂಗ್ಸ್‌ಗಳಲ್ಲಿ 117 ಸಿಕ್ಸರ್ ಸಿಡಿಸಿದ್ದರೆ, ಸೂರ್ಯಕುಮಾರ್ ಯಾದವ್ 57 ಇನ್ನಿಂಗ್ಸ್‌ಗಳಲ್ಲಿ 123 ಸಿಕ್ಸರ್ ಸಿಡಿಸುವ ಮೂಲಕ ದಾಖಲೆ ಬರೆದರು. ರೋಹಿತ್ ಶರ್ಮಾ 140 ಇನ್ನಿಂಗ್ಸ್‌ಗಳಲ್ಲಿ 182 ಸಿಕ್ಸರ್ ಸಿಡಿಸಿದ್ದು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಹಾಗೂ ದ.ಆಫ್ರಿಕಾ ತಲಾ ಒಂದೊಂದು ಪಂದ್ಯಗಳಲ್ಲಿ ಜಯಗಳಿಸಿದ್ದು, ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

Leave a Comment