ಬೆಂಗಳೂರು: ಭಾರತದ ಕ್ರಿಕೆಟಿಗ ಹಾಗೂ ಪಶ್ಚಿಮ ಬಂಗಾಳದ ಕ್ರೀಡಾ ಹಾಗೂ ಯುವಜನ ಸಬಲೀಕರಣ ಸಚಿವ ಮನೋಜ್ ತಿವಾರಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಎದುರು ಎರಡನೇ ಇನಿಂಗ್ಸ್‌ನಲ್ಲಿ ಆಕರ್ಷಕ ಶತಕ ಸಿಡಿಸಿ ಗಮನ ಸೆಳೆದಿದ್ದಾರೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಮನೋಜ್ ತಿವಾರಿ 152 ಎಸೆತಗಳನ್ನು ಎದುರಿಸಿ ಮೂರಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಲ್ಲಿನ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಾರ್ಖಂಡ್ ಎದುರು ಬೆಂಗಾಲ್ ತಂಡವು ಆರಂಭದಿಂದಲೂ ಹಿಡಿತ ಸಾಧಿಸುತ್ತಲೇ ಬಂದಿತ್ತು. ಇನ್ನು ಪಂದ್ಯದ 5ನೇ ದಿನದಾಟದ ವೇಳೆ ಬೆಂಗಾಲ್ ತಂಡವು 129 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿದ್ದಾಗ ಕ್ರೀಸ್‌ಗಿಳಿದ ಮನೋಜ್ ತಿವಾರಿ ಎದುರಾಳಿ ತಂಡದ ಬೌಲರ್‌ಗಳ ಮೇಲೆ
ಸವಾರಿ ಮಾಡಿಸಿದರು. 5ನೇ ವಿಕೆಟ್‌ಗೆ ಮನೋಜ್ ತಿವಾರಿ ಹಾಗೂ ಅಭಿಷೇಕ್ ಪೋರೆಲ್ ಜೋಡಿ 72 ರನ್‌ಗಳ ಜತೆಯಾಟ ನಿಭಾಯಿಸಿತು. ಮನೋಜ್ ತಿವಾರಿ ಒಟ್ಟು 185 ಎಸೆತಗಳನ್ನು ಎದುರಿಸಿ 136 ರನ್ ಗಳಿಸಿ ರನೌಟ್ ಆಗಿ ಪೆವಿಲಿಯನ್ ಸೇರಿದರು. ಅವರ ಸೊಗಸಾದ ಇನಿಂಗ್ಸ್‌ನಲ್ಲಿ 19 ಬೌಂಡರಿ ಹಾಗೂ 2 ಆಕರ್ಷಕ ಸಿಕ್ಸರ್ ಕೂಡಾ ಸೇರಿತ್ತು.
















